ಬಿಹಾರದ ಭಾಗಲ್ಪುರದಲ್ಲಿ ಬಾಂಬ್ ಸ್ಫೋಟ: 12 ಜನರ ಸಾವು, ಹಲವರಿಗೆ ಗಾಯ

PHOTO COURTESY:TWITTER
ಪಾಟ್ನಾ,ಮಾ.4: ಬಿಹಾರದ ಭಾಗಲ್ಪುರ ಪಟ್ಟಣದಲ್ಲಿ ಗುರುವಾರ ರಾತ್ರಿ 11:30ರ ಸುಮಾರಿಗೆ ಸರಣಿ ಸ್ಫೋಟಗಳು ಸಂಭವಿಸಿದ್ದು,12 ಜನರು ಮೃತಪಟ್ಟಿದ್ದಾರೆ ಮತ್ತು ಇತರ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಭಾಗಲ್ಪುರದ ಮಾಯಾಗಂಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತತರ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಜವಾಲಿ ಚಾಕ್ ಗ್ರಾಮದಲ್ಲಿ ಈ ಸ್ಫೋಟಗಳು ಸಂಭವಿಸಿವೆ. ಸ್ಫೋಟದ ತೀವ್ರತೆಯಿಂದಾಗಿ ನಾಲ್ಕು ಮನೆಗಳು ಕುಸಿದು ಬಿದ್ದಿದ್ದು,ಸುಮಾರು 15 ಕಿ.ಮೀ.ದೂರವರೆಗೂ ಸ್ಫೋಟದ ಶಬ್ದ ಕೇಳಿಸಿತ್ತು.
ಕಚ್ಚಾ ಬಾಂಬ್ಗಳ ಅಕ್ರಮ ತಯಾರಿಕೆ ವೇಳೆ ಸ್ಫೋಟವು ಸಂಭವಿಸಿರಬಹುದು. ಆರೋಪಿಗಳು ಪಟಾಕಿಗಳನ್ನು ತಯಾರಿಸುತ್ತಿದ್ದ ಸಾಧ್ಯತೆಯೂ ಇದೆ. ಸ್ಫೋಟವು ತೀವ್ರ ಸ್ವರೂಪದ್ದಾಗಿದ್ದರಿಂದ ಸ್ಫೋಟಕಗಳು ಭಾರೀ ಪ್ರಮಾಣದಲ್ಲಿದ್ದವು ಎಂದು ಭಾವಿಸಲಾಗಿದೆ ಎಂದು ಡಿಐಜಿ ಸುಜಿತಕುಮಾರ ತಿಳಿಸಿದರು. ಅವಶೇಷಗಳಡಿ ಇನ್ನಷ್ಟು ಜನರು ಸಿಕ್ಕಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಅಂದಾಜಿಸಿದ್ದಾರೆ. ಘಟನೆ ನಡೆದ ಬೆನ್ನಿಗೇ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿತ್ತು.
ಭಾಗಲ್ಪುರ ಮತ್ತು ಮುಂಗೇರ್ ಸುತ್ತಲಿನ ಪ್ರದೇಶಗಳು ಬಂದೂಕುಗಳು ಮತ್ತು ಬಾಂಬ್ಗಳ ಅಕ್ರಮ ತಯಾರಿಕೆಗಾಗಿ ಕುಖ್ಯಾತಿಯನ್ನು ಪಡೆದಿವೆ.





