‘‘ಆಹಾರ, ನೀರು ಇಲ್ಲ; ದಯವಿಟ್ಟು ನಮ್ಮನ್ನು ಕರೆದೊಯ್ಯಿರಿ’’: ಭಾರತೀಯ ವಿದ್ಯಾರ್ಥಿಗಳ ಗುಂಪು

ಹೊಸದಿಲ್ಲಿ, ಮಾ. 4: ಯುದ್ಧ ಗ್ರಸ್ತ ಪೂರ್ವ ಉಕ್ರೇನ್ನಲ್ಲಿ ಸಿಲುಕಿಕೊಂಡ ಭಾರತೀಯ ವಿದ್ಯಾರ್ಥಿಗಳ ಗುಂಪೊಂದು ಪಶ್ಚಿಮ ಗಡಿಗೆ ತೆರಳಲು ತಮಗೆ ನೆರವು ನೀಡುವಂತೆ ಆಗ್ರಹಿಸಿದೆ. ರಶ್ಯದ ಕ್ಷಿಪಣಿಗಳು ಮತ್ತ ಫಿರಂಗಿಗಳಿಂದ ನಿರಂತರ ದಾಳಿಗೆ ತುತ್ತಾದ ಉಕ್ರೇನ್ನ ಎರಡನೇ ಅತಿ ದೊಡ್ಡ ನಗರ ಖಾರ್ಕಿವ್ ಅನ್ನು ತೊರೆಯುವಂತೆ ಭಾರತ ಸರಕಾರ ತುರ್ತು ಸಲಹೆ ನೀಡಿದ ಬಳಿಕ ವಿದ್ಯಾರ್ಥಿಗಳು ಕಳೆದ ಎರಡು ದಿನಗಳಿಂದ ಪಿಸೋಚಿನ್ನಲ್ಲಿ ಇದ್ದಾರೆ. ಎರಡು ದಿನಗಳಿಂದ ಊಟ ಮಾಡಿಲ್ಲ. ಈ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿದೆ.
ಮೈನಸ್ ಡಿಗ್ರಿ ತಾಪಮಾನವಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ‘‘ನಾವು ಎರಡು ದಿನಗಳಿಂದ ಆಹಾರ, ನೀರು ಇಲ್ಲದೆ ಇಲ್ಲಿ ಸಿಲುಕಿಕೊಂಡಿದ್ದೇವೆ. ಇಲ್ಲಿ ಸುಮಾರು 1,000 ವಿದ್ಯಾರ್ಥಿಗಳು ಇದ್ದಾರೆ. ಇಲ್ಲಿಂದ ಲಿವಿವ್ಗೆ ಬಸ್ನಲ್ಲಿ ಕರೆದೊಯ್ಯಲು ಗುತ್ತಿಗೆದಾರರು 500ರಿಂದ 700 ಡಾಲರ್ ಕೇಳುತ್ತಿದ್ದಾರೆ. ನಾವು ರಾಯಬಾರಿ ಕಚೇರಿಯಿಂದ ಯಾವುದೇ ರೀತಿಯ ಮಾಹಿತಿ ಸ್ವೀಕರಿಸಿಲ್ಲ’’ ಎಂದು ಓರ್ವ ವಿದ್ಯಾರ್ಥಿ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ‘‘ಬಸ್ನಲ್ಲಿ ತೆರಳಲು ಸಾಧ್ಯವಾಗದೇ ಇದ್ದರೆ, ರೈಲು ನಿಲ್ದಾಣಕ್ಕೆ ನಡೆದುಕೊಂಡು ಹೋಗುವಂತೆ ಹಾಗೂ ರೈಲಿನಲ್ಲಿ ತೆರಳುವಂತೆ ನಮಗೆ ತಿಳಿಸಲಾಗಿದೆ. ಆದರೆ, ನಾವು ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದಾಗ ಇಲ್ಲಿಯೇ ಇರುವಂತೆ ಹಾಗೂ ನಡೆದುಕೊಂಡು ತೆರಳುವುದು ಅಪಾಯಕಾರಿ ಎಂದು ತಿಳಿಸಿದ್ದಾರೆ’’ ಎಂದು ಇನ್ನೋರ್ವ ವಿದ್ಯಾರ್ಥಿ ಹೇಳಿದ್ದಾರೆ.
ನಾವು ಸಂಘರ್ಷದ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಯಾವುದೂ ಸ್ಪಷ್ಟವಾಗುತ್ತಿಲ್ಲ. ‘‘ನೀವು ಅಲ್ಲೇ ಇರಿ’’ ಎಂದು ರಾಯಭಾರಿ ಕಚೇರಿ ಹೇಳಿದೆ. ಆದರೆ, ಹೇಗೆ ? ತಾಪಮಾನ ತೀವ್ರವಾಗಿ ಇಳಿಕೆಯಾಗುತ್ತಿದೆ. ಹಿಮಪಾತ ಕೂಡ ಆಗುತ್ತಿದೆ ಎಂದು ಅವರು ಹೇಳಿದ್ದಾರೆ. ‘‘ದಯವಿಟ್ಟು ನಮ್ಮನ್ನು ಯಾವುದೇ ರೀತಿಯಿಂದಲಾದರೂ ಭಾರತಕ್ಕೆ ಕರೆದುಕೊಂಡು ಹೋಗಿ’’ ಎಂದು ಮೊದಲ ವಿದ್ಯಾರ್ಥಿ ಮನವಿ ಮಾಡಿದ್ದಾರೆ.
‘‘ನಮ್ಮನ್ನು ಕೊಲ್ಲುತ್ತಾರೆ, ನೆರವು ನೀಡಿ’’
ಸಂಘರ್ಷ ಪೀಡಿತ ಉಕ್ರೇನ್ನ ಈಶಾನ್ಯದ ನಗರವಾದ ಸುಮಿಯಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಗುಂಪೊಂದು ತಮ್ಮನ್ನು ಸ್ಥಳಾಂತರಿಸಲು ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದ್ದಾರೆ. ವೀಡಿಯೊ ಸಂದೇಶದಲ್ಲಿ ಸುಮಾರು 100 ವಿದ್ಯಾರ್ಥಿಗಳು ಉಕ್ರೇನ್ನ ಪಶ್ಚಿಮ ಗಡಿಗೆ ತೆರಳಲು ನೆರವು ನೀಡಲು ಮನವಿ ಮಾಡುತ್ತಿರುವುದು ಕಂಡು ಬಂದಿದೆ.
‘‘ನೀವು ನಮಗಾಗಿ ಏನನ್ನೂ ಮಾಡಿಲ್ಲ. ಕೆಲವು ವಿದೇಶಿ ವಿದ್ಯಾರ್ಥಿಗಳು ಸುಮಿಯಿಂದ ತೆರಳಿರುವುದನ್ನು ನಾವು ನೋಡಿದ್ದೇವೆ. ಆದರೆ, ಅವರ ಮೇಲೆ ಗುಂಡು ಹಾರಿಸಲಾಗಿದೆ. ಅದರ ಬಗ್ಗೆ ನಮ್ಮಲ್ಲಿ ವೀಡಿಯೊ ಇದೆ’’ ಎಂದು ವಿದ್ಯಾರ್ಥಿ ಸಂದೇಶದಲ್ಲಿ ಹೇಳಿದ್ದಾರೆ. ‘‘ನಾವು ಸರಕಾರದ ನೆರವನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ, ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇಲ್ಲಿಂದ 50 ಕಿ.ಮೀ. ದೂರದಲ್ಲಿರುವ ರಶ್ಯ ಗಡಿಯಲ್ಲಿ ಬಸ್ಗಳು ಕಾಯುತ್ತಿವೆ ಎಂದು ಕೆಲವರು ಹೇಳುತ್ತಿದ್ದಾರೆ. ನಾವು ಹಾಸ್ಟೆಲ್ನಿಂದ ಹೊರಗೆ ತೆರಳಿದರೆ, ನಾಲ್ಕು ದಿಕ್ಕುಗಳಲ್ಲಿ ಸ್ನೈಪರ್ಗಳು ಇದ್ದಾರೆ. ವಾಯು ದಾಳಿಯ ಭೀತಿ ಇದೆ. ಪ್ರತಿ 20 ನಿಮಿಷಕ್ಕೆ ಬಾಂಬ್ ದಾಳಿ ನಡೆಯುತ್ತಿದೆ’’ ಎಂದು ವಿದ್ಯಾರ್ಥಿ ವೀಡಿಯೊದಲ್ಲಿ ಹೇಳಿದ್ದಾರೆ.







