ಹಿಜಾಬ್ ಗೊಂದಲ: ಮಂಗಳೂರು ರಥಬೀದಿ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಘೋಷಣೆ
ಇಂಟರ್ನಲ್ ಪರೀಕ್ಷೆ ಮುಂದೂಡಿಕೆ

ಮಂಗಳೂರು, ಮಾ.5: ಕಳೆದ 2-3 ದಿನಗಳಿಂದ ಹಿಜಾಬ್ ವಿಚಾರವಾಗಿ ಗೊಂದಲವೇರ್ಪಟ್ಟಿದ್ದ ನಗರದ ರಥಬೀದಿಯಲ್ಲಿರುವ ದಯಾನಂದ ಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಸಾರಲಾಗಿದೆ. ಅದೇರೀತಿ ಜಿಲ್ಲಾಧಿಕಾರಿಯ ನಿರ್ದೇಶನದಂತೆ ಸದ್ಯ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಸದ್ಯ ಆನ್‌ಲೈನ್ ತರಗತಿಯನ್ನು ನಡೆಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಮೆಸೇಜ್ ಕಳುಹಿಸಲಾಗಿದೆ.
ರಥಬೀದಿ ಕಾಲೇಜಿನಲ್ಲಿ ಗುರುವಾರ ಹಿಜಾಬ್ ಧಾರಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದ್ದರು. ಶುಕ್ರವಾರವೂ ಇದು ಮುಂದುವರಿದಿದ್ದು, ಐವರು ಹಿಜಾಬ್ ಧಾರಿ ವಿದ್ಯಾರ್ಥಿನಿಯರನ್ನು ಕಾಲೇಜಿನ ಗೇಟ್ ಬಳಿ ಕೆಲವು ಉಪನ್ಯಾಸಕರು, ಹಾಗು ಕಾಲೇಜಿಗೆ ಸಂಬಂಧಿಸಿದ ಕೆಲವರು ತಡೆದಿದ್ದರು. ಈ ವೇಳೆ ಎಬಿವಿಪಿ ಕಾರ್ಯಕರ್ತನಾಗಿರುವ ವಿದ್ಯಾರ್ಥಿ ಸಾಯಿ ಸಂದೇಶ ಹಾಗೂ ಇತರರು ಕಾಲೇಜು ಪ್ರವೇಶ ದ್ವಾರದಲ್ಲಿ ಅಡ್ಡಿಪಡಿಸಿದ್ದಲ್ಲದೆ, ಮಾತಿನ ಚಕಮಕಿ ನಡೆಸಿದ್ದಾನೆ ಎಂದು ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿಯೊಬ್ಬಳು ಬಂದರು ಪೊಲೀಸ್ ಠಾಣೆಗೆ ದೂರು ಕೂಡಾ ನೀಡಿದ್ದಾಳೆ.
ಈ ಎಲ್ಲ ಗೊಂದಲದ ಹಿನ್ನೆಲೆಯಲ್ಲಿ ಇಂದಿನಿಂದ ಕಾಲೇಜಿಗೆ ಅನಿರ್ದಿಷ್ಟಾವಧಿಗೆ ರಜೆ ಘೋಷಿಸಿ ಕಾಲೇಜು ಆಡಳಿತ ಸಮಿತಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದೆ.