ಇಸ್ಲಾಂ ಸ್ವೀಕರಿಸಿದ ಡಚ್ ಫುಟ್ಬಾಲ್ ದಂತಕತೆ ಕ್ಲಾರೆನ್ಸ್ ಸೀಡಾರ್ಫ್

ಕ್ಲಾರೆನ್ಸ್ ಸೀಡಾರ್ಫ್ (Photo: instagram.com/clarenceseedorf)
ದುಬೈ: ಡಚ್ ಫುಟ್ಬಾಲ್ ಲೆಜೆಂಡ್ ಕ್ಲಾರೆನ್ಸ್ ಸೀಡಾರ್ಫ್ ಅವರು ಇಸ್ಲಾಂ ಸ್ವೀಕರಿಸಿರುವುದಾಗಿ ಘೋಷಿಸಿದ್ದಾರೆ. ಎಸಿ ಮಿಲಾನ್, ರಿಯಲ್ ಮ್ಯಾಡ್ರಿಡ್ ಹಾಗೂ ಅಜಾಕ್ಸ್ ಫುಟ್ಬಾಲ್ ಕ್ಲಬ್ ನ ಮಾಜಿ ಮಿಡ್ ಫೀಲ್ಡರ್ ಸಾಮಾಜಿಕ ಮಾಧ್ಯಮದಲ್ಲಿ ಈ ಘೋಷಣೆ ಮಾಡಿದ್ದಾರೆ.
"ನಾನು ಮುಸ್ಲಿಂ ಕುಟುಂಬಕ್ಕೆ ಸೇರುವ ಸಂಭ್ರಮದಲ್ಲಿ ಬಂದಿರುವ ಎಲ್ಲಾ ಉತ್ತಮ ಸಂದೇಶಗಳಿಗೆ ವಿಶೇಷ ಧನ್ಯವಾದಗಳು" ಎಂದು ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಸೀಡಾರ್ಫ್ ಬರೆದಿದ್ದಾರೆ.
ಯುಇಎಫ್ ಎ ಚಾಂಪಿಯನ್ಸ್ ಲೀಗ್ ಇತಿಹಾಸದಲ್ಲಿ ಮೂರು ವಿಭಿನ್ನ ಕ್ಲಬ್ ಗಳೊಂದಿಗೆ ಚಾಂಪಿಯನ್ಸ್ ಲೀಗ್ ಅನ್ನು ಗೆದ್ದ ಏಕೈಕ ಆಟಗಾರ ಸೀಡಾರ್ಫ್. ಲಿಯೊನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರಂತಹ ಆಟಗಾರರೂ ಈ ಸಾಧನೆಯನ್ನು ಇನ್ನೂ ಮಾಡಿಲ್ಲ.
“ಪ್ರಪಂಚದಾದ್ಯಂತ ಇರುವ ಎಲ್ಲಾ ಸಹೋದರರು ಮತ್ತು ಸಹೋದರಿಯರನ್ನು ಸೇರಲು ನನಗೆ ತುಂಬಾ ಸಂತೋಷವಾಗಿದೆ. ವಿಶೇಷವಾಗಿ ನನ್ನ ಪತ್ನಿ ಸೋಫಿಯಾ ಅವರು ನನಗೆ ಇಸ್ಲಾಂನ ಅರ್ಥವನ್ನು ಹೆಚ್ಚು ಆಳವಾಗಿ ಕಲಿಸಿದ್ದಾರೆ. ನಾನು ನನ್ನ ಹೆಸರನ್ನು ಬದಲಾಯಿಸಲಿಲ್ಲ. ನನ್ನ ಹೆತ್ತವರು ನೀಡಿದ ಕ್ಲಾರೆನ್ಸ್ ಸೀಡಾರ್ಫ್ ಎಂಬ ಹೆಸರನ್ನು ಮುಂದುವರಿಸುತ್ತೇನೆ! ನಾನು ನನ್ನ ಪ್ರೀತಿಯನ್ನು ಪ್ರಪಂಚದ ಎಲ್ಲರಿಗೂ ಕಳುಹಿಸುತ್ತಿದ್ದೇನೆ’’ ಎಂದು ಹೇಳಿದ್ದಾರೆ.
ಸೀಡಾರ್ಫ್ ತನ್ನ ರಾಷ್ಟ್ರೀಯ ತಂಡವನ್ನು 87 ಬಾರಿ ಪ್ರತಿನಿಧಿಸಿದ್ದಾರೆ ಹಾಗೂ ಮೂರು ಯುಇಎಫ್ ಎ ಯುರೋಪಿಯನ್ ಫುಟ್ಬಾಲ್ ಚಾಂಪಿಯನ್ಶಿಪ್ ಗಳಲ್ಲಿ (1996, 2000, 2004) ಮತ್ತು 1998 ಫಿಫಾ ವಿಶ್ವಕಪ್ ನಲ್ಲಿ ಆಡಿದ್ದರು.