ತೊಕ್ಕೊಟ್ಟು: ಮೀನು ವ್ಯಾಪಾರಿಗೆ ತಲವಾರು ತೋರಿಸಿ 2.15 ಲಕ್ಷ ರೂ. ದರೋಡೆ
ಮುಸುಕುಧಾರಿ ತಂಡದಿಂದ ಕೃತ್ಯ

ಮಂಗಳೂರು, ಮಾ.5: ಟೆಂಪೋವನ್ನು ಅಡ್ಡಗಟ್ಟಿ ಮೀನು ವ್ಯಾಪಾರಿಯೊಬ್ಬರ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿ 2.15 ಲಕ್ಷ ರೂ. ನಗದು ದೋಚಿದ ಘಟನೆ ಶನಿವಾರ ಮುಂಜಾನೆ ರಾಷ್ಡ್ರೀಯ ಹೆದ್ದಾರಿ 66 ರ ಆಡಂಕುದ್ರು ಎಂಬಲ್ಲಿ ನಡೆದಿದೆ.
ಉಳ್ಳಾಲ ಮುಕ್ಕಚ್ಚೇರಿಯ ಮೀನಿನ ವ್ಯಾಪಾರಿ ಮುಸ್ತಫ(47) ಹಲ್ಲೆಗೊಳಗಾದವರು. ತೊಕ್ಕೊಟ್ಟು ಬಳಿಯ ಕಲ್ಲಾಪುವಿನಲ್ಲಿ ಮೀನು ವ್ಯಾಪಾರ ನಡೆಸುತ್ತಿರುವ ಮುಸ್ತಫ ಎಂದಿನಂತೆ ಇಂದು ಮುಂಜಾನೆ ತನ್ನ ಟೆಂಪೊದಲ್ಲಿ ದಕ್ಕೆಗೆ ಮೀನು ಖರೀದಿಸಲೆಂದು ಹೊರಟಿದ್ದರು. ಜೊತೆಗೆ ಮಾಸ್ತಿಕಟ್ಟೆಯ ಮೂಸ ಎಂಬವರು ಕೂಡಾ ಇದ್ದರು. ಟೆಂಪೊ ಆಡಂಕುದ್ರು ತಲುಪುತ್ತಿದ್ದಂತೆಯೇ ಹಿಂದಿನಿಂದ ಧಾವಿಸಿ ಬಂದ ಕೆಂಪು ಬಣ್ಣದ ಕಾರೊಂದು ಟೆಂಪೊವನ್ನು ಅಡ್ಡಗಟ್ಟಿದೆ. ಕಾರಿನಲ್ಲಿದ್ದ ಮೂವರು ಮುಸಕುಧಾರಿಗಳ ಪೈಕಿ ಇಬ್ಬರು ಕೆಳಗಿಳಿದು ಹಣದ ಬ್ಯಾಗ್ ನೀಡುವಂತೆ ಬೆದರಿಸಿದರು. ಕೊಡಲು ನಿರಾಕರಿಸಿದ ಮುಸ್ತಫಾ ಟೆಂಪೊದಿಂದ ಕೆಳಗಿಳಿಯಲು ಮುಂದಾದಾಗ ದುಷ್ಕರ್ಮಿಗಳು ಅವರತ್ತ ತಲವಾರು ಬೀಸಿದ್ದಾರೆ. ಆಗ ಕೈಯಿಂದ ತಲವಾರನ್ನು ತಡೆದಾಗ ಎರಡೂ ಕೈಗಳಿಗೂ ಗಾಯಗಳಾಗಿವೆ. ಇದೇ ಸಂದರ್ಭ ಮುಸ್ತಫರಲ್ಲಿದ್ದ 2 ಲಕ್ಷ 15 ಸಾವಿರ ರೂಪಾಯಿಗಳನ್ನ ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ ಎಂದು ಮುಸ್ತಫ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ವೇಳೆ ಮೂಸಾರಿಗೆ ಅಪಾಯ ಉಂಟಾಗಿಲ್ಲ ಎಂದು ತಿಳಿದುಬಂದಿದೆ.
ಗಾಯಾಳು ಮುಸ್ತಫ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರೋಡೆ ನಡೆದ ಸ್ಥಳಕ್ಕೆ ಎಸಿಪಿ ದಿನಕರ ಶೆಟ್ಟಿ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಈ ಪರಿಸರದ ಸಿಸಿಟಿವಿ ಕ್ಯಾಮೆರ ಫೂಟೇಜನ್ನು ಪರಿಶೀಲನೆ ನಡೆಸಿದೆ.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈರತ್ವ ದ ಹಿನ್ನೆಲೆಯಲ್ಲಿ ದಾಳಿ ಶಂಕೆ: ಶಶಿಕುಮಾರ್
ಮುಸ್ತಫ ಎಂಬವರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು 2 ಲಕ್ಷ ರೂ.ಗಳನ್ನು ದೋಚಿರುವುದಾಗಿ ಹೇಳಲಾಗಿದ್ದು ಪರಿಶೀಲನೆ ನಡೆಸಲಾಗುತ್ತಿದೆ. ವೈರತ್ವ ದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವ ಅನುಮಾನವಿದ್ದು ದಾಳಿ ಮಾಡಿದವರು ಬ್ಯಾರಿ ಭಾಷೆ ಯಲ್ಲಿಮಾತನಾಡುತ್ತಿದ್ದರೆನ್ನಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
.jpeg)







