ಕಪಿಲ್ ದೇವ್ ಹೆಸರಲ್ಲಿದ್ದ ಹಳೆಯ ದಾಖಲೆ ಮುರಿದ ರವೀಂದ್ರ ಜಡೇಜ

ಮೊಹಾಲಿ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ 2 ನೇ ದಿನವಾದ ಶನಿವಾರ ಆಲ್ ರೌಂಡರ್ ರವೀಂದ್ರ ಜಡೇಜ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ (ಅಜೇಯ 175 ರನ್) ಇನಿಂಗ್ಸ್ ಕಟ್ಟುವ ಮೂಲಕ ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.7 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಗರಿಷ್ಠ ಸ್ಕೋರ್ ಗಳಿಸಿದ ಜಡೇಜ ಕಪಿಲ್ ದೇವ್ ಅವರ ಹೆಸರಲ್ಲಿದ್ದ ಸುದೀರ್ಘ ದಾಖಲೆಯೊಂದನ್ನು ಮುರಿದರು. ಕಪಿಲ್ 35 ವರ್ಷಗಳ ಕಾಲ ಈ ದಾಖಲೆಯನ್ನು ಉಳಿಸಿಕೊಂಡಿದ್ದರು. ಅವರು ಡಿಸೆಂಬರ್ 1986 ರಲ್ಲಿ ಕಾನ್ಪುರದಲ್ಲಿ ಶ್ರೀಲಂಕಾ ವಿರುದ್ಧವೇ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ 163 ರನ್ ಗಳಿಸಿದ್ದರು. ಜಡೇಜ ಶನಿವಾರದಂದು ಅತ್ಯುತ್ತಮ ಇನಿಂಗ್ಸ್ ಆಡಿ ಕಪಿಲ್ ಸ್ಕೋರ್ ಅನ್ನು ಮೀರಿ ನಿಂತರು.
ಜಡೇಜ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.7 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ 150 ಕ್ಕಿಂತ ಹೆಚ್ಚು ಸ್ಕೋರ್ ದಾಖಲಿಸಿದ ಮೂರನೇ ಭಾರತೀಯ ಎನಿಸಿಕೊಂಡರು. ಜಡೇಜ ಹಾಗೂ ಕಪಿಲ್ ಹೊರತುಪಡಿಸಿ, ರಿಷಬ್ ಪಂತ್ 7ನೇ ಕ್ರಮಾಂಕದಲ್ಲಿ 150 ಪ್ಲಸ್ ಸ್ಕೋರ್ ಗಳಿಸಿದ್ದಾರೆ. ಭಾರತ ವಿಕೆಟ್‌ಕೀಪರ್-ಬ್ಯಾಟರ್ ಪಂತ್ 2019 ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 159 ರನ್ ಗಳಿಸಿದ್ದರು.
76.75ರ ಸ್ಟ್ರೈಕ್ ರೇಟ್ ನಲ್ಲಿ ಔಟಾಗದೆ 175 ರನ್ ಗಳಿಸಿದ ಎಡಗೈ ಬ್ಯಾಟರ್ ಜಡೇಜ ಇನಿಂಗ್ಸ್ ನಲ್ಲಿ ಮೂರು ಶತಕದ ಜೊತೆಯಾಟದಲ್ಲಿ ಭಾಗಿಯಾದರು. ಮೊದಲಿಗೆ ಪಂತ್, ಬಳಿಕ ಅಶ್ವಿನ್ ಹಾಗೂ ಕೊನೆಯದಾಗಿ ಮುಹಮ್ಮದ್ ಶಮಿ ಅವರೊಂದಿಗೆ ಶತಕದ ಜೊತೆಯಾಟ ನಡೆಸಿ ಭಾರತವು 8 ವಿಕೆಟ್ ನಷ್ಟಕ್ಕೆ 574 ರನ್ ಗಳಿಸಲು ನೆರವಾದರು.







