ಎ.24ರಂದು ಕಲಬುರಗಿ ಜಿಲ್ಲೆಗೆ ಪ್ರಧಾನಮಂತ್ರಿಗಳ ಸಂಭಾವ್ಯ ಭೇಟಿ: ಜಿಲ್ಲಾಧಿಕಾರಿ ಯಶ್ವಂತ ವಿ. ಗುರುಕರ್

ಅಧಿಕಾರಿಗಳೊಂದಿಗೆ ಫೂರ್ವಭಾವಿ ಸಭೆ ನಡೆಸಿದ ಜಿಲ್ಲಾಧಿಕಾರಿ
ಕಲಬುರಗಿ, ಮಾ.5: ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಅಂಗವಾಗಿ ಗ್ರಾಮ ಸಭೆಯಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಎಪ್ರಿಲ್ 24 ರಂದು ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮ ಪಂಚಾಯತಿಗೆ ಭೇಟಿ ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಯಶ್ವಂತ ವಿ. ಗುರುಕರ್ ಶನಿವಾರ ತಮ್ಮ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಫೂರ್ವಭಾವಿ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಎಪ್ರಿಲ್ 24 ರಂದು ಶಿವಮೊಗ್ಗ, ವಿಜಯ ನಗರ ಅಥವಾ ಕಲಬುರಗಿ ಜಿಲ್ಲೆ ಪೈಕಿ ಯಾವುದಾದರು ಒಂದು ಜಿಲ್ಲೆಯನ್ನು ಪ್ರವಾಸಕ್ಕೆ ಪ್ರಧಾನಮಂತ್ರಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಕಲಬುರಗಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಭೀಮಳ್ಳಿ ಗ್ರಾಮಕ್ಕೆ ಪ್ರಧಾನಮಂತ್ರಿ ಭೇಟಿ ನೀಡಲಿದ್ದಾರೆ ಎಂದರು.
ಅಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಅಂಗವಾಗಿ ಪ್ರಧಾನಮಂತ್ರಿ ಭೀಮಳ್ಳಿಯಿಂದಲೇ ವರ್ಚುವಲ್ ಮೂಲಕ ದೇಶದ 2.50 ಲಕ್ಷ ಗ್ರಾಮ ಪಂಚಾಯತಿಗಳ ಪ್ರತಿನಿಧಿಗಳನ್ನು ಸಂಬೋಧಿಸಿ ಮಾತನಾಡಲಿದ್ದಾರೆ. ಜೊತೆಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳೊಂದಿಗೂ ಸಂವಾದ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಇದೇ ಮಾ.8 ಅಥವಾ 9 ರಂದು ಪ್ರಧಾನಮಂತ್ರಿಗಳ ಭದ್ರತಾ ತಂಡ ಜಿಲ್ಲೆಗೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಿಸಲಿದೆ ಎಂದರು.
ಪಿ.ಎಂ. ಅವರಿಂದ ಚಾಲನೆಗೆ ಕಾರ್ಯಕ್ರಮ ರೂಪಿಸಿ: ವಿವಿಧ ಇಲಾಖೆಗಳ ಕಾರ್ಯಕ್ರಮ ಅನುಷ್ಠಾನ, ಉದ್ಘಾಟನೆಯಂತಹ ಕಾರ್ಯಕ್ರಮಗಳ ಪೈಕಿ ಪ್ರಧಾನಮಂತ್ರಿ ಅಮೃತ ಹಸ್ತದಿಂದ ಚಾಲನೆ ನೀಡಬಹುದಾದ ಜನಪರ ಕಾರ್ಯಕ್ರಮಗಳಿದಲ್ಲಿ ಅದರ ಕ್ರಿಯಾ ಯೋಜನೆಯನ್ನು ಒಂದು ವಾರದೊಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೊಸ ಕ್ರಿಯಾತ್ಮಕ, ನಾವೀನ್ಯತೆವುಳ್ಳ ಕಾರ್ಯಕ್ರಮ ಆಯೋಜಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡಲೆ ಈ ಮೂರು ಗ್ರಾಮಗಳಿಗೆ ತೆರಳಿ ತಮ್ಮ ಇಲಾಖೆ ವ್ಯಾಪ್ತಿಗೊಳಪಡುವ ಏನಾದರೂ ಸಮಸ್ಯೆಗಳಿದಲ್ಲಿ ಬಗೆಹರಿಸಬೇಕು. ಕ್ಲಿಷ್ಟಕರ ಸಮಸ್ಯೆಗಳಿದಲ್ಲಿ ತಮ್ಮ ಗಮನಕ್ಕೆ ತರಬೇಕು ಎಂದು ಯಶವಂತ ವಿ. ಗುರುಕರ್ ತಿಳಿಸಿದರು.
ದೇಶದ ಪ್ರಧಾನಮಂತ್ರಿ ಭೇಟಿ ನೀಡುತ್ತಿರುವ ಕಾರಣ ಭೀಮಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದರು.







