"ಅಪೂರ್ಣ ಮೆಟ್ರೋ ಉದ್ಘಾಟಿಸುವುದಕ್ಕಿಂತ, ವಿದ್ಯಾರ್ಥಿಗಳನ್ನು ರಕ್ಷಿಸುವತ್ತ ಗಮನ ಹರಿಸಿ"
ಪ್ರಧಾನಿ ಮೋದಿಗೆ ಶರದ್ ಪವಾರ್ ಸಲಹೆ

ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರು ಪುಣೆಗೆ ಭೇಟಿ ನೀಡುವ ಮುನ್ನಾ ದಿನವಾದ ಶನಿವಾರ ಎನ್‌ಸಿಪಿ ವರಿಷ್ಠ ಶರದ್ ಪವಾರ್, ಪ್ರಧಾನಿ ಅವರು ಉದ್ಘಾಟಿಸಲಿರುವ ಮೆಟ್ರೋ ಸೇವೆಯ ಕೆಲಸ ಅಪೂರ್ಣವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಈ ಸಂದರ್ಭ ಯುದ್ಧಗ್ರಸ್ತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವತ್ತ ಹೆಚ್ಚು ಗಮನ ಹರಿಸಬೇಕಾದ ಅಗತ್ಯತೆ ಇದೆ ಎಂದುಅವರು ತಿಳಿಸಿದ್ದಾರೆ.
ಮೆಟ್ರೋ ಸೇವೆ ಉದ್ಘಾಟಿಸಲು ಹಾಗೂ ಇತರ ಯೋಜನೆಗಳನ್ನು ಅನಾವರಣಗೊಳಿಸಲು ಪ್ರಧಾನಿ ಅವರು ರವಿವಾರ ಪುಣೆಗೆ ಭೇಟಿ ನೀಡಲಿದ್ದಾರೆ.
ನಗರದ ವಾರ್ಜೆ ಪ್ರದೇಶದಲ್ಲಿ ಆಸ್ಪತ್ರೆಯೊಂದರ ಉದ್ಘಾಟನೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಪವಾರ್, ‘‘ಪುಣೆಯಲ್ಲಿ ಅಪೂರ್ಣವಾದ ಪ್ರಮುಖ ಯೋಜನೆಗಳಿವೆ ಎಂಬುದನ್ನು ನಾನು ಒಪ್ಪುತ್ತೇನೆ. ಅದರಲ್ಲಿ ಪ್ರಮುಖವಾದುದನ್ನು ಪ್ರಧಾನಿ ಅವರು ಉದ್ಘಾಟಿಸಲಿದ್ದಾರೆ. ಇದಕ್ಕಿಂತ ಉಕ್ರೇನ್‌ನಲ್ಲಿ ಸಿಲುಕಿದ ವಿದ್ಯಾರ್ಥಿಗಳನ್ನು ರಕ್ಷಿಸುವುದು ಹೆಚ್ಚು ಮುಖ್ಯವಾದುದು. ಇದರ ಬಗ್ಗೆ ಕೇಂದ್ರದ ಆಡಳಿತಾರೂಢ ಪಕ್ಷ ಗಂಭೀರವಾಗಿ ಚಿಂತಿಸಬೇಕು ಎಂಬುದು ನನ್ನ ಭಾವನೆ’’ ಎಂದು ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿಕೊಂಡ ಭಾರತೀಯ ವಿದ್ಯಾರ್ಥಿಗಳ ಸಂಕಷ್ಟದ ಬಗ್ಗೆ ಮಾತನಾಡಿದ ಶರದ್ ಪವಾರ್, ರಶ್ಯ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದ ಹಲವು ವಿದ್ಯಾರ್ಥಿಗಳು ಸಂತ್ರಸ್ತರಾಗಿದ್ದಾರೆ ಎಂದರು.
‘ಅಲ್ಲಿ ಸಿಲುಕಿದ ವಿದ್ಯಾರ್ಥಿಗಳೊಂದಿಗೆ ನಾನು ಮಾತುಕತೆ ನಡೆಸಿದ್ದೇನೆ. ಉಕ್ರೇನ್ ಗಡಿ ದಾಟುವಂತೆ ರಾಯಭಾರ ಕಚೇರಿ ಅವರಿಗೆ ತಿಳಿಸಿದೆ. ಅದು ವಿದ್ಯಾರ್ಥಿಗಳು ಇರುವ ಸ್ಥಳದಿಂದ 5 ಗಂಟೆ ಕಾಲ್ನಡಿಗೆಯ ದೂರದಲ್ಲಿದೆ’ ಎಂದು ಅವರು ತಿಳಿಸಿದ್ದಾರೆ.
‘ವಿದ್ಯಾರ್ಥಿಗಳು ನಡೆಯಲು ಸಿದ್ಧ. ಆದರೆ, ತೀವ್ರ ಚಳಿ, ಬಾಂಬ್, ಗುಂಡಿನ ದಾಳಿ ತೀವ್ರ ಕಳವಳಕಾರಿ ವಿಚಾರ. ಆಡಳಿತಾರೂಢ ಪಕ್ಷ (ಬಿಜೆಪಿ)ಈ ಬಗ್ಗೆ ಗಮನಹರಿಸೇಕು ಎಂಬುದು ನನ್ನ ಭಾವನೆ. ಪುಣೆಯ ಪ್ರಮುಖ ಯೋಜನೆಗಳು ಅಪೂರ್ಣ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಪ್ರಧಾನಿ ಅವರು ಪ್ರಮುಖ ಯೋಜನೆಯನ್ನು ಉದ್ಘಾಟಿಸುತ್ತಿದ್ದಾರೆ. ಆದರೆ, ಇದಕ್ಕಿಂತ ಉಕ್ರೇನ್ಲ್ಲಿ ಸಿಲುಕಿದ ವಿದ್ಯಾರ್ಥಿಗಳನ್ನು ರಕ್ಷಿಸುವುದು ತುಂಬಾ ಮುಖ್ಯವಾದುದು’’ ಎಂದು ಶರದ್ ಪವಾರ್ ಹೇಳಿದ್ದಾರೆ.







