ಉಡುಪಿ: ನಾಲ್ವರಿಗೆ ಕೋವಿಡ್ ಸೋಂಕು ದೃಢ
ಉಡುಪಿ, ಮಾ.5: ಜಿಲ್ಲೆಯಲ್ಲಿ ಶನಿವಾರ ಕೇವಲ ನಾಲ್ವರಲ್ಲಿ ಮಾತ್ರ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ದಿನದಲ್ಲಿ 19 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಕೋವಿಡ್‌ಗೆ ಚಿಕಿತ್ಸೆಯಲ್ಲಿರುವವರ ಸಂಖ್ಯೆ 52ಕ್ಕಿಳಿದಿದೆ.
ಇಂದು ಪಾಸಿಟಿವ್ ಬಂದ ನಾಲ್ವರಲ್ಲಿ ಮೂವರು ಪುರುಷರು ಹಾಗೂ ಓರ್ವ ಮಹಿಳೆ. ಪಾಸಿಟಿವ್ ಬಂದವರೆಲ್ಲರೂ ಉಡುಪಿ ತಾಲೂಕಿನವರು. ಎಲ್ಲರಿಗೂ ಅವರವರ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಐವರು ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದು, ಒಬ್ಬರು ವೆಂಟಿಲೇಟರ್, ಇಬ್ಬರು ಐಸಿಯುನಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ಇಂದು ಒಟ್ಟು 19 ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 18454ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 1407 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಜಿಲ್ಲೆಯಲ್ಲಿ 18,416ಕ್ಕೇರಿದೆ.
2122 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 2122 ಮಂದಿ ಕೋವಿಡ್‌ಗಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 137 ಮಂದಿ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 151 ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಉಳಿದಂತೆ 68 ಮಂದಿ ಮೊದಲ ಡೋಸ್ ಹಾಗೂ 1903 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15ರಿಂದ 18 ವರ್ಷ ದೊಳಗಿನ 43 ಮಂದಿ ಮೊದಲ ಡೋಸ್ ಹಾಗೂ 1106 ಮಂದಿ ಎರಡನೇ ಡೋಸ್‌ನ್ನು ಇಂದು ಪಡೆದುಕೊಂಡಿದ್ದಾರೆ.