ಮೂರು ಐಎಎಫ್ ವಿಮಾನಗಳಲ್ಲಿ ಉಕ್ರೇನ್ನಿಂದ ತಾಯ್ನಾಡಿಗೆ ಬಂದಿಳಿದ 629 ವಿದ್ಯಾರ್ಥಿಗಳು

PHOTO COURTESY:TWITTER
ಹೊಸದಿಲ್ಲಿ: ಭಾರತೀಯ ವಾಯುಪಡೆಯ ಮೂರು ವಿಮಾನಗಳು ಉಕ್ರೇನ್ನ ನೆರೆದೇಶಗಳಿಂದ 629 ಭಾರತೀಯರನ್ನು ಹೊತ್ತುಕೊಂಡು ಶನಿವಾರ ನಸುಕಿನಲ್ಲಿ ದಿಲ್ಲಿ ಸಮೀಪದ ಹಿಂಡೋನ್ ವಾಯುನೆಲೆಗೆ ಆಗಮಿಸಿವೆ.
‘ಆಪರೇಷನ್ ಗಂಗಾʼದ ಭಾಗವಾಗಿ ಈವರೆಗೆ 10 ವಿಮಾನಗಳಲ್ಲಿ 2,056 ಜನರನ್ನು ಭಾರತಕ್ಕೆ ವಾಪಸ್ ಕರೆತರಲಾಗಿದೆ ಎಂದು ಐಎಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಐಎಎಫ್ನ ಮೂರು ಸಿ-17 ಭಾರೀ ಸಾರಿಗೆ ವಿಮಾನಗಳು ಶುಕ್ರವಾರ ಹಿಂಡನ್ ವಾಯುನೆಲೆಯಿಂದ ಉಕ್ರೇನ್ನ ನೆರೆದೇಶಗಳಿಗೆ ತೆರಳಿದ್ದವು.
ಈ ವಿಮಾನಗಳು ರೊಮೇನಿಯಾ, ಸ್ಲೊವಾಕಿಯಾ ಮತ್ತು ಪೋಲಂಡ್ಗಳಿಂದ 629 ಭಾರತೀಯರನ್ನು ತೆರವುಗೊಳಿಸಿವೆ. ಅವು ಭಾರತದಿಂದ 16.5 ಟನ್ ಪರಿಹಾರ ಸಾಮಗ್ರಿಗಳನ್ನೂ ಈ ದೇಶಗಳಿಗೆ ತಲುಪಿಸಿವೆ ಎಂದು ಹೇಳಿಕೆಯು ತಿಳಿಸಿದೆ.
11 ವಿಶೇಷ ನಾಗರಿಕ ವಿಮಾನಗಳೂ ಉಕ್ರೇನ್ನ ನೆರೆದೇಶಗಳಿಂದ 2,200ಕ್ಕೂ ಅಧಿಕ ಭಾರತೀಯರೊಂದಿಗೆ ಇಂದು ತಡರಾತ್ರಿ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. ಇದೇ ವೇಳೆ ನಾಲ್ಕು ಐಎಎಫ್ ವಿಮಾನಗಳು ರೊಮೇನಿಯಾ,ಪೋಲಂಡ್ ಮತ್ತು ಸ್ಲೊವಾಕಿಯಾಗಳಿಗೆ ತೆರಳಿವೆ ಎಂದು ಹೇಳಿಕೆಯು ತಿಳಿಸಿದೆ.
ಉಕ್ರೇನ್ನ ಖಾರ್ಕಿವ್ನಲ್ಲಿ 300 ಮತ್ತು ಸುಮಿಯಲ್ಲಿ 700 ಸೇರಿದಂತೆ ಕನಿಷ್ಠ 1,000 ಭಾರತೀಯರು ಈಗಲೂ ಯುದ್ಧಗ್ರಸ್ತ ವಲಯದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ತೆರವುಗೊಳಿಸಲು ಬಸ್ಗಳ ವ್ಯವಸ್ಥೆ ಮಾಡುವುದೇ ಈಗಿನ ದೊಡ್ಡ ಸವಾಲು ಆಗಿದೆ ಎಂದು ಸರಕಾರವು ಶುಕ್ರವಾರ ಹೇಳಿತ್ತು.
‘ಕೊನೆಯ ವ್ಯಕ್ತಿಯನ್ನು ತೆರವುಗೊಳಿಸುವವರೆಗೂ ಆಪರೇಷನ್ ಗಂಗಾ ಮುಂದುವರಿಯುತ್ತದೆ. ಇನ್ನೂ ಸುಮಾರು ಎರಡರಿಂದ ಮೂರು ಸಾವಿರ ಭಾರತೀಯರು ಉಕ್ರೇನ್ನಲ್ಲಿರುವ ಸಾಧ್ಯತೆಯಿದೆ. ಪೂರ್ವ ಉಕ್ರೇನ್ನ ಯುದ್ಧಗ್ರಸ್ತ ವಲಯಗಳಿಂದ ಭಾರತೀಯ ವಿದ್ಯಾರ್ಥಿಗಳನ್ನು ತೆರವುಗೊಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ’ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಸುದ್ದಿಗಾರರಿಗೆ ತಿಳಿಸಿದರು.







