ಮಂಗಳೂರು: ಶಿಕ್ಷಕಿಗೆ ಆನ್‌ಲೈನ್ ವಂಚನೆ
ಮಂಗಳೂರು, ಮಾ.5: ನಗರದ ಕಾಲೆಜೊಂದರ ಶಿಕ್ಷಕಿಗೆ ಆನ್‌ಲೈನ್ ಮೂಲಕ ವಂಚಿಸಿದ ಘಟನೆ ಬೆಳಕಿಗೆ ಬಂದಿದ್ದು, ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಕ್ಷಕಿಯು ಕೊಡಿಯಾಲ್ ಬೈಲ್ ಬ್ರಾಂಚಿನ ಯೂನಿಯನ್ ಹಾಗೂ ಮೂಡುಬಿದಿರೆ ಬ್ರಾಂಚಿನ ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ. ಶಿಕ್ಷಕಿಯ ಓರ್ವ ಅಣ್ಣ ಕನ್ನಡ ಮ್ಯಾಟ್ರಿಮೋನಿಯಲ್ಲಿ ಪ್ರೊಫೈಲ್ವೊಂದನ್ನು ತೆರೆದಿದ್ದು, ಆ ಮೂಲಕ ಅನಿಲ್ ಚಂದ್ರ ಎಂಬಾತನ ಪ್ರೊಫೈಲನ್ನು ಶಿಕ್ಷಕಿಗೆ ಶೇರ್ ಮಾಡಿ ಆತನ ಮೊಬೈಲ್ ನಂಬ್ರ ನೀಡಿದ್ದರು. ಫೆ.7ರಿಂದ ಶಿಕ್ಷಕಿಯು ಅನಿಲ್ ಚಂದ್ರನ ಪೋನಿನಲ್ಲಿ ಮಾತನಾಡುತ್ತಿದ್ದು ಈ ವೇಳೆ ಅನಿಲ್ ಚಂದ್ರನು ತಾನು ಬೆಲ್ಜಿಯಂನಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದ್ದ ಎನ್ನಲಾಗಿದೆ.
ಫೆ.23ರಂದು ಆರೋಪಿ ಅನಿಲ್ ಚಂದ್ರನು ಫಿರ್ಯಾದಿ ಶಿಕ್ಷಕಿಗೆ ಕರೆ ಮಾಡಿ ಜೈಪುರದಲ್ಲಿ ವಾಸವಾಗಿರುವ ತನ್ನ ಸಂಬಂಧಿಕರೊಬ್ಬರ ಆರೋಗ್ಯ ಸ್ಥಿತಿಯು ಗಂಭೀರವಾಗಿದ್ದು 1.20 ಲಕ್ಷ ರೂ. ಕಳುಹಿಸಿಕೊಡುವಂತೆ ಕೋರಿಕೊಂಡಿದ್ದ. ಶಿಕ್ಷಕಿಯು ಅನಿಲ್ಚಂದ್ರನ ಮಾತನ್ನು ನಂಬಿ ಆತನು ನೀಡಿದ ಡಾ. ಸಲೀಂ ಅಲಿ, ಕೋಟಾಕ್ ಮಹಿಂದ್ರ ಬ್ಯಾಂಕ್ ಖಾತೆ ಸಂಖ್ಯೆ 3646505816ಕ್ಕೆ ತನ್ನ ಯೂನಿಯನ್ ಬ್ಯಾಂಕ್ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್‌ಗಳಿಂದ 1.20 ಲಕ್ಷ ರೂ.ಜಮಾಯಿಸಿದ್ದರು. ಬಳಿಕ ಪುನಃ ಹಣಕ್ಕಾಗಿ ಬೇಡಿಕೆ ಸಲ್ಲಿಸಿದ್ದು, ಫೆ.24ರಂದು 1 ಲಕ್ಷ ರೂ. ಹೀಗೆ 2.20 ಲಕ್ಷ ರೂ. ವರ್ಗಾಯಿಸಿದ್ದರು. ಫೆ.26ರಂದು ಅನಿಲ್ ಚಂದ್ರ ತಾನು ಭಾರತಕ್ಕೆ ಬರುವುದಾಗಿ ತಿಳಿಸಿದ್ದ. ಫೆ,26ರಂದು ಬೆಳಗ್ಗೆ 9:30ಕ್ಕೆ ಶಿಕ್ಷಕಿಗೆ +917428862622ನಿಂದ ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ಅನಿಲ್ ಚಂದ್ರ ಕಸ್ಟಮ್ಸ್ನವರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಅವರಿಗೆ ಸಹಾಯ ಮಾಡಲು 1.15 ಲಕ್ಷ ರೂ. ಕಳುಹಿಸುವಂತೆ ಕೇಳಿಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಾನು ಮೋಸ ಹೋದುದನ್ನು ಅರಿತ ಶಿಕ್ಷಕಿ ಸೆನ್ ಠಾಣೆಗೆ ದೂರು ನೀಡಿ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.