ಅಕ್ರಮ ಮರಳುಗಾರಿಕೆ: ಸರಕಾರಿ ಅಧಿಕಾರಿ, ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳ ಸೆರೆ
ಮಂಗಳೂರು, ಮಾ.5: ನಗರದ ಬಜಾಲ್ ಫೈಸಲ್‌ನಗರದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಅಡ್ಡೆಗೆ ಗುರುವಾರ ದಾಳಿ ನಡೆಸಿದ ಸರಕಾರಿ ಅಧಿಕಾರಿ ಮತ್ತು ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅದರಂತೆ ಪೊಲೀಸರು ಅಕ್ರಮ ಮರಳುಗಾರಿಕೆ ನಿರತ ಆರೋಪಿಗಳಾದ ಹರ್ಷದ್, ಇಮ್ರಾನ್, ಅಶ್ಫಾನ್ ಎಂಬವರನ್ನು ಬಂಧಿಸಿದ್ದಾರೆ.
ಬಜಾಲ್ ಫೈಸಲ್ ನಗರದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ನಿರಂಜನ್ ನೇತೃತ್ವದ ತಂಡವು ಗುರುವಾರ ಬೆಳಗ್ಗೆ 8:30ಕ್ಕೆ ದಾಳಿ ನಡೆಸಿ ಆಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ದೋಣಿಗಳನ್ನು ವಶಪಡಿಸಿಕೊಂಡಿತ್ತು. ಅಲ್ಲದೆ ಫೈಸಲ್ ನಗರದಲ್ಲಿ ನೇತ್ರಾವತಿ ನದಿಗೆ ತಾಗಿಕೊಂಡಂತೆ ಇರುವ ತೋಡಿನಲ್ಲಿ ಅಕ್ರಮ ಮರಳುಗಾರಿಕೆಗೆ ಬಳಸಿದ 3 ಫೈಬರ್ ದೋಣಿಗಳನ್ನು ಅಡಗಿಸಿಟ್ಟಿರುವುದು ಕಂಡು ಬಂದಿತ್ತು. ಹಾಗೇ ಅದನ್ನು ಕೆಲಸಗಾರರ ಮೂಲಕ ತೋಡಿನಿಂದ ತೆಗೆಯುತ್ತಿರುವ ವೇಳೆ ಅಂದರೆ ಮಧ್ಯಾಹ್ನ 1:40ಕ್ಕೆ ನಾಲ್ಕು ಮಂದಿ ಯುವಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ತಡೆದು ನಿಲ್ಲಿಸಿದ್ದಲ್ಲದೆ, ಅವಾಚ್ಯ ಶಬ್ದದಿಂದ ಬೈದರು ಎಂದು ಆರೋಪಿಸಲಾಗಿದೆ.
ಆರೋಪಿಗಳ ಪೈಕಿ ಒಬ್ಬಾತ ದೋಣಿಗಳನ್ನು ಹುಡಿ ಮಾಡಿದರೆ ನಿಮ್ಮನ್ನೂ ನಾವು ಹುಡಿ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಲ್ಲದೆ, ಹರ್ಷದ್ ಎಂಬಾತ ತನ್ನ ಸ್ನೇಹಿತರಲ್ಲಿ ನೀನು ಹೇಳಿದರೆ ಈಗಲೇ ನಾನು ಇವರನ್ನೆಲ್ಲಾ ಹೊಡೆಯುತ್ತೇನೆ ಎಂದು ಸವಾಲು ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.