ನಾಳೆ ಉಕ್ರೇನ್‌ನಿಂದ 2,200 ಭಾರತೀಯರು ತಾಯ್ನಾಡಿಗೆ
ಹೊಸದಿಲ್ಲಿ: ಯುದ್ಧ ಗ್ರಸ್ತ ಉಕ್ರೇನ್‌ನಿಂದ 11 ವಿಮಾನಗಳಲ್ಲಿ 2,200 ಭಾರತೀಯರು ರವಿವಾರ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ನಾಗರಿಕ ವಾಯುಯಾನ ಸಚಿವಾಲಯ ತಿಳಿಸಿದೆ.
ಉಕ್ರೇನ್‌ನಿಂದ ಶನಿವಾರ 15 ವಿಮಾನಗಳ ಮೂಲಕ ಸುಮಾರು 3,000 ಭಾರತೀಯರನ್ನು ತೆರವುಗೊಳಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ 12 ವಿಶೇಷ ನಾಗರಿಕ ವಿಮಾನಗಳು ಹಾಗೂ 3 ಭಾರತೀಯ ವಾಯು ಪಡೆಯ ವಿಮಾನಗಳು ಪಾಲ್ಗೊಂಡಿವೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ತನ್ನ ವಿರುದ್ಧ ರಶ್ಯ ಸೇನಾ ಆಕ್ರಮಣ ನಡೆಸುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ ಫೆಬ್ರವರಿ 24ರಿಂದ ತನ್ನ ವಾಯು ಸಂಚಾರ ಪ್ರದೇಶಕ್ಕೆ ನಿರ್ಬಂಧ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ರೊಮೇನಿಯಾ, ಹಂಗೇರಿಯಾ, ಸ್ಲೋವಾಕಿಯಾ ಹಾಗೂ ಪೋಲ್ಯಾಂಡ್‌ನಂತಹ ಉಕ್ರೇನ್ ನ ನೆರೆಯ ರಾಷ್ಟ್ರಗಳ ಮೂಲಕ ವಿಮಾನ ಬಳಸಿ ತೆರವುಗೊಳಿಸಲಾಗುತ್ತಿದೆ.
ಇಂದು (ಶನಿವಾರ) ಹಂಗೇರಿಯ ಬುಡಾಪೆಸ್ಟ್ ನಿಂದ 5, ರೊಮೇನಿಯಾದ ಸಕೇವಾದಿಂದ 4, ಸ್ಲೊವಾಕಿಯಾದ ಕೊಸಿಸೆಯಿಂದ 1 ಹಾಗೂ ಪೋಲ್ಯಾಂಡ್ ನ ಝೆಸ್ರೊದದಿಂದ 2 ವಿಮಾನಗಳು ಕಾರ್ಯಾಚರಣೆ ನಡೆಸಿವೆ ಎಂದು ಸಚಿವಾಲಯ ತಿಳಿಸಿದೆ.
ನಾಳೆ ಬುಡಾಪೆಸ್ಟ್ ಕೊಸಿಸೆ, ಝೆರೆವ್ ಹಾಗೂ ಬುಕಾರೆಸ್ಟ್‌ನಿಂದ 11 ವಿಶೇಷ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ ಹಾಗೂ 2,200 ಭಾರತೀಯರನ್ನು ಭಾರತಕ್ಕೆ ವಾಪಸ್ ತರಲಿದೆ ಎಂದು ಸಚಿವಾಲಯ ತಿಳಿಸಿದೆ.





