ಶೆಲ್ಟರ್ಗಳಲ್ಲಿಯೇ ಇರಿ, ಅನಗತ್ಯ ಅಪಾಯ ತಪ್ಪಿಸಿ: ಸುಮಿ ನಗರದ ಅತಂತ್ರ ವಿದ್ಯಾರ್ಥಿಗಳಿಗೆ ಭಾರತ ಸೂಚನೆ

photo courtesy:twitter
ಹೊಸದಿಲ್ಲಿ: ಯುದ್ಧದ ನಡುವೆ ಪೂರ್ವ ಉಕ್ರೇನ್ನ ಸುಮಿ ನಗರದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ತಾನು ತೀವ್ರ ಕಳವಳಗೊಂಡಿದ್ದೇನೆ ಎಂದು ಶನಿವಾರ ಹೇಳಿರುವ ಭಾರತವು, ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಶೆಲ್ಟರ್ಗಳಲ್ಲಿಯೇ ಉಳಿದುಕೊಳ್ಳುವಂತೆ ಅವರಿಗೆ ಮನವಿಯನ್ನು ಮಾಡಿಕೊಂಡಿದೆ.
‘ಯುದ್ಧಗ್ರಸ್ತ ವಲಯಗಳಿಂದ ವಿದ್ಯಾರ್ಥಿಗಳ ಸುರಕ್ಷಿತ ನಿರ್ಗಮನಕ್ಕಾಗಿ ತಕ್ಷಣವೇ ಕದನ ವಿರಾಮಕ್ಕಾಗಿ ರಾಜತಾಂತ್ರಿಕ ಮಾರ್ಗಗಳ ಮೂಲಕ ನಾವು ರಷ್ಯ ಮತ್ತು ಉಕ್ರೇನ್ಗಳನ್ನು ಬಲವಾಗಿ ಒತ್ತಾಯಿಸಿದ್ದೇವೆ ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ತಿಳಿಸಿದ್ದಾರೆ.
ಸುಮಿಯಲ್ಲಿ ನಿರಂತರ ಶೆಲ್ ದಾಳಿಗಳು ಮತ್ತು ಬೀದಿಗಳನ್ನು ಸುತ್ತುತ್ತಿರುವ ಸಶಸ್ತ್ರ ವ್ಯಕ್ತಿಗಳಿಂದಾಗಿ ಮರಿಯೊಪೋಲ್ಗೆ ತೆರಳಲು ತಮಗೆ ಸಾಧ್ಯವಾಗಿಲ್ಲ ಎಂದು ಸರಕಾರಕ್ಕೆ ಸಂದೇಶದೊಂದಿಗೆ ಸುಮಿಯಲ್ಲಿನ ಕೆಲವು ವಿದ್ಯಾರ್ಥಿಗಳು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮನವಿ ಹೊರಬಿದ್ದಿದೆ.
‘ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ, ಶೆಲ್ಟರ್ಗಳಲ್ಲಿಯೇ ಉಳಿಯುವಂತೆ ಮತ್ತು ಅನಗತ್ಯ ಅಪಾಯಗಳನ್ನು ತಪ್ಪಿಸುವಂತೆ ನಾವು ವಿದ್ಯಾರ್ಥಿಗಳಿಗೆ ಸೂಚಿಸಿದ್ದೇವೆ. ಸಚಿವಾಲಯ ಮತ್ತು ಭಾರತೀಯ ರಾಯಭಾರ ಕಚೇರಿಗಳು ಸುಮಿಯಲ್ಲಿನ ವಿದ್ಯಾರ್ಥಿಗಳೊಂದಿಗೆ ನಿಯಮಿತ ಸಂಪರ್ಕದಲ್ಲದೆ ’ ಎಂದು ಬಾಗ್ಚಿ ತಿಳಿಸಿದ್ದಾರೆ.
ಸುಮಿಯಲ್ಲಿ ಸುಮಾರು 700 ಭಾರತೀಯ ವಿದ್ಯಾರ್ಥಿಗಳು ಸಿಕ್ಕಿಕೊಂಡಿದ್ದಾರೆ ಎಂದು ಬಾಗ್ಚಿ ಶುಕ್ರವಾರ ಹೇಳಿದ್ದರು.





