ಚೀನಾದ ರಕ್ಷಣಾ ಬಜೆಟಿನಲ್ಲಿ 7.1% ಹೆಚ್ಚಳ; ಭಾರತದ ರಕ್ಷಣಾ ಬಜೆಟ್ಗಿಂತ 3 ಪಟ್ಟು ಹೆಚ್ಚಿನ ಬಜೆಟ್ ಮಂಡನೆ

PHOTO COURTESY:TWITTER
ಬೀಜಿಂಗ್: ತನ್ನ ವಾರ್ಷಿಕ ರಕ್ಷಣಾ ಬಜೆಟ್ನಲ್ಲಿ 7.1% ಹೆಚ್ಚಳ ಮಾಡಿರುವ ಚೀನಾ, 2022ರ ಆರ್ಥಿಕ ವರ್ಷಕ್ಕೆ 230 ಬಿಲಿಯನ್ ಡಾಲರ್ ಮೊತ್ತದ ಬಜೆಟ್ ಮಂಡಿಸಿದ್ದು ಸಮಗ್ರ ಯುದ್ಧಸನ್ನಧ್ಧತೆಗೆ ವೇಗ ನೀಡಲು ಈ ಹೆಚ್ಚಳ ಅಗತ್ಯವಾಗಿದೆ ಎಂದಿದೆ.
ಚೀನಾದ ಸಂಸತ್ತಿನಲ್ಲಿ ಶನಿವಾರ ದೇಶದ ಪ್ರೀಮಿಯರಲ್ಲಿ ಕೆಖಿಯಾಂಗ್ ಮಂಡಿಸಿದ ರಕ್ಷಣಾ ಬಜೆಟ್, ಭಾರತ ಮಂಡಿಸಿದ ರಕ್ಷಣಾ ಬಜೆಟ್(5.25 ಲಕ್ಷ ಕೋಟಿ ರೂ.)ಗಿಂತ 3 ಪಟ್ಟು ಅಧಿಕವಾಗಿದೆ ಎಂದು ಸರಕಾರಿ ಸ್ವಾಮ್ಯದ ಚೀನಾ ಡೈಲಿ ಪತ್ರಿಕೆ ವರದಿ ಮಾಡಿದೆ. 2021ರಲ್ಲಿ ಚೀನಾವು ರಕ್ಷಣಾ ಬಜೆಟಿನಲ್ಲಿ 6.8% ಹೆಚ್ಚಳ ಮಾಡಿ 209 ಬಿಲಿಯನ್ ಡಾಲರ್ ಮೊತ್ತದ ಬಜೆಟ್ ಮಂಡಿಸಿತ್ತು.
ಪೀಪಲ್ಸ್ ಲಿಬರೇಷನ್ ಆರ್ಮಿ(ಚೀನಾ ಸೇನೆ)ಯ ಸಮಗ್ರ ಯುದ್ಧಸನ್ನದ್ಧತೆಗೆ ವೇಗ ನೀಡುವುದು ನಮ್ಮ ಉದ್ದೇಶವಾಗಿದೆ. ದೇಶದ ಭದ್ರತೆ, ಸಾರ್ವಭೌಮತ್ವ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ರಕ್ಷಿಸಲು ಚೀನಾದ ಸೇನೆಯು ಮಿಲಿಟರಿ ಹೋರಾಟವನ್ನು ದೃಢವಾದ ಮತ್ತು ಪೂರಕ ರೀತಿಯಲ್ಲಿ ನಡೆಸಬೇಕಾಗಿದೆ ಎಂದು ಬಜೆಟ್ ಮಂಡಿಸಿದ ಲಿ ಕೆಖಿಯಾಂಗ್ ಹೇಳಿದ್ದಾರೆ.
ಚೀನಾವು ಅಮೆರಿಕದ ಬಳಿಕ ಅತ್ಯಧಿಕ ರಕ್ಷಣಾ ಬಜೆಟ್ ಹೊಂದಿರುವ ದೇಶವಾಗಿದ್ದು ಅಮೆರಿಕದ ಜತೆಗಿನ ರಾಜಕೀಯ ಮತ್ತು ಮಿಲಿಟರಿ ಸಂಬಂಧ ಹಳಸಿರುವ ಮತ್ತು ಪೂರ್ವ ಲಡಾಖ್ನಲ್ಲಿ ಭಾರತದೊಂದಿಗಿನ ಗಡಿ ಬಿಕ್ಕಟ್ಟು ಮುಂದುವರಿದಿರುವ ಸಂದರ್ಭದಲ್ಲಿ ಈ ವರ್ಷದ ರಕ್ಷಣಾ ಬಜೆಟ್ನಲ್ಲಿ ಹೆಚ್ಚಳ ಮಾಡಿರುವುದು ಗಮನಾರ್ಹವಾಗಿದೆ.







