ಉಕ್ರೇನ್ನ ಮತ್ತೊಂದು ಬಂದರು ನಗರಕ್ಕೆ ರಷ್ಯಾ ದಿಗ್ಬಂಧನ

photo courtesy:twitter
ಕೀವ್: ಉಕ್ರೇನ್ನ 2ನೇ ಅತೀ ದೊಡ್ಡ ನಗರ ಖೆರ್ಸಾನ್ ವಶಪಡಿಸಿಕೊಂಡ ಬಳಿಕ ರಷ್ಯಾ ಮತ್ತೊಂದು ಬಂದರು ನಗರ ಮರಿಯುಪೊಲ್ ಮೇಲೆ ಕಣ್ಣಿಟ್ಟಿದೆ. ಉಕ್ರೇನ್ಗೆ ಸಮುದ್ರ ಮಾರ್ಗದ ಮೂಲಕ ಮಿತ್ರರಾಷ್ಟ್ರಗಳು ಶಸ್ತ್ರಾಸ್ತ್ರ ಪೂರೈಸದಂತೆ ತಡೆಯುವುದು ರಷ್ಯಾದ ತಂತ್ರವಾಗಿದೆ ಎಂದು ವರದಿಯಾಗಿದೆ.
ಉಕ್ರೇನ್ ಮೇಲಿನ ರಷ್ಯಾ ಆಕ್ರಮಣಕ್ಕೆ ಸಂಬಂಧಿಸಿ ಶನಿವಾರದ ಕೆಲವು ಮಹತ್ವದ ಬೆಳವಣಿಗೆಗಳು ಹೀಗಿವೆ:
ಬಂದರು ನಗರ ಮರಿಯುಪೊಲ್ ಮೇಲೆ ಮುತ್ತಿಗೆ ಹಾಕಿರುವ ರಷ್ಯಾ ಪಡೆ ತೀವ್ರ ಬಾಂಬ್ ದಾಳಿ ನಡೆಸಿದೆ. 4,50,000 ಜನಸಂಖ್ಯೆಯ ನಗರಕ್ಕೆ ವಿದ್ಯುತ್, ಆಹಾರ, ನೀರು ಪೂರೈಕೆ ಮತ್ತು ಸಾರಿಗೆ ವ್ಯವಸ್ಥೆಯನ್ನು ಕಡಿತಗೊಳಿಸಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ.
ನಗರವನ್ನು ನಿರ್ಬಂಧಿಸಲಾಗಿದ್ದು, ಈಗ ತಲೆದೋರಿರುವ ಮಾನವೀಯ ಸಮಸ್ಯೆಗಳ ಪರಿಹಾರಕ್ಕೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ನಗರದ ಮೇಯರ್ ವದಿಮ್ ಬಾಯ್ಚೆಂಕೊ ಹೇಳಿದ್ದಾರೆ.ರಷ್ಯಾದ ದಾಳಿಯಿಂದ ಮತ್ತೆ ಹಲವು ಅಮಾಯಕ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಹೇಳಿದೆ.
ಫೆಬ್ರವರಿ 24ರಂದು ಆಕ್ರಮಣ ಆರಂಭವಾದಂದಿನಿಂದ ಉಕ್ರೇನ್ನಲ್ಲಿ ಕನಿಷ್ಟ 331 ನಾಗರಿಕರು ಮೃತಪಟ್ಟು 675 ಮಂದಿ ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಹೇಳಿದೆ.ಉಕ್ರೇನ್ನ 2ನೇ ಅತೀ ದೊಡ್ಡ ಪರಮಾಣು ಸ್ಥಾವರದತ್ತ ಮುನ್ನುಗ್ಗುತ್ತಿರುವ ರಷ್ಯಾ ಪಡೆ ಈಗ ಕೇವಲ 32 ಕಿ.ಮೀ ದೂರದಲ್ಲಿದೆ ಎಂದು ಅಮೆರಿಕ ಹೇಳಿದೆ.





