ಜನಾಂದೋಲನಗಳ ಮಹಾಮೈತ್ರಿ ಇಂದಿನ ಅಗತ್ಯ
ಭಾಗ-3
ಸರಕಾರಕ್ಕೆ ಜನರ ಕೂಗು ಕೇಳಿಸುತ್ತಿಲ್ಲ. ಅದರ ಕಣ್ಣು ಕುರುಡಾಗಿದೆ ಅಥವಾ ಬೇಕಂತಲೇ ಕುರುಡು ಎಂಬಂತೆ ನಟಿಸುತ್ತಿದೆ. ಸರಕಾರಕ್ಕೆ ಕಿವಿಗಳೂ ಕೇಳಿಸುತ್ತಿಲ್ಲ. ಅದರ ಕಿವಿ ಕಿವುಡಾಗಿದೆ ಅಥವಾ ಬೇಕಂತಲೇ ಕಿವುಡು ನಟಿಸುತ್ತಿದೆ. ಸರಕಾರಕ್ಕೆ ಮೊದಲೇ ಹೃದಯವಿಲ್ಲ. ಕುತಂತ್ರವನ್ನು ಚಾಣಾಕ್ಷತನ ಅಂದುಕೊಂಡಿದೆ. ಅಂತಃಕರಣ ಪೈಸೆಯಷ್ಟೂ ಇಲ್ಲ. ಇದಕ್ಕಾಗಿಯೇ ಸರಕಾರಕ್ಕೆ ಜನರ ಕೂಗು ಕೇಳುತ್ತಿಲ್ಲ.
ಇಂತಹ ಸಂವೇದನಾಹೀನ ಪರಿಸ್ಥಿತಿ ಇರುವುದರಿಂದಲೇ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಇದೇ 2022 ಮಾರ್ಚ್ ತಿಂಗಳ ಅಸೆಂಬ್ಲಿ ಅಧಿವೇಶನ ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಸಂದರ್ಭದಲ್ಲಿ 3 ಕರಾಳ ಕಾಯ್ದೆಯನ್ನು ಹಿಂದೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಪರ್ಯಾಯ ಜನಾಧಿವೇಶನ ಆಯೋಜಿಸಿದೆ. ಒಂದು ವಾರ ನಿರಂತರ ಧರಣಿ ಸತ್ಯಾಗ್ರಹ ರೂಪಿಸಿದೆ. ಇಂತಹ ಹೋರಾಟಗಳಲ್ಲಿ ನಾಡಿನ ಮೂಲೆ ಮೂಲೆಗಳಿಂದಲೂ ಜನಸಾಗರ ಕೂಡಿಕೊಳ್ಳಬೇಕು ಎಂದು ವಿನಂತಿಸಲು ಈ ಜನಾಂದೋಲನಗಳ ಮಹಾಮೈತ್ರಿಯ ಜನಜಾಗೃತಿ ಜಾಥಾ. ಎಲ್ಲರನ್ನೂ ಒಳಗೊಂಡು ಮುನ್ನಡೆಯಲು.
ನೆನಪಿಸಿಕೊಳ್ಳೋಣ
ನಮ್ಮ ಜೀವಿತಾವಧಿಯಲ್ಲಿ ಒಂದು ಅವಿಸ್ಮರಣೀಯ ಹೋರಾಟ ನಡೆಯಿತು. ಕರ್ನಾಟಕ ರಾಜ್ಯದಲ್ಲಿ ಹಾಲಿ ಇರುವ ಕೃಷಿ ಕಾಯ್ದೆಯಂತಹ ವುಗಳನ್ನು ಬಹಳ ಹಿಂದೆಯೇ ಕೇಂದ್ರ ಸರಕಾರವೂ ಜಾರಿಗೆ ತರಲು ಹವಣಿಸಿತ್ತು. ಇದನ್ನು ಪ್ರತಿಭಟಿಸಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ಕೃಷಿ ಕಾರ್ಮಿಕರು ಹೀಗೆ ಎಲ್ಲಾ ಸಮುದಾಯದ ಜನವರ್ಗಗಳ ಬೆಂಬಲದೊಡನೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್.ಕೆ.ಎಂ.) ನೇತೃತ್ವದಲ್ಲಿ ಲಕ್ಷ ಲಕ್ಷ ಜನರು ಭಾರತದ ರಾಜಧಾನಿ ದಿಲ್ಲಿಯ ನಾಲ್ಕು ಮೂಲೆಗಳಲ್ಲಿ ದಂಡುಕಟ್ಟಿಕೊಂಡು ಲಗ್ಗೆ ಇಟ್ಟರು. ಅಲ್ಲಲ್ಲೇ ಟೆಂಟು ಹಾಕಿ ಜಗ್ಗದೆ ಕೂತರು. ಹಗಲು ರಾತ್ರಿ ಎನ್ನದೆ. ಒಂದು ದಿನವಲ್ಲ ಎರಡು ದಿನಗಳೂ ಅಲ್ಲ, ವರ್ಷಾನುಗಟ್ಟಲೆ. ಕೊರೋನ ಸಾಂಕ್ರಾಮಿಕ ಅಬ್ಬರಿಸುತ್ತಿದ್ದರೂ ಆ ದಿಲ್ಲಿಯ ಕೊರೆಯುವ ಚಳಿಯಲ್ಲಿ, ಆ ದಿಲ್ಲಿಯ ಕ್ರೂರ ಬಿಸಿಲಿನಲ್ಲಿ, ಆ ವೈಪರಿತ್ಯದ ಗಾಳಿಯಲ್ಲಿ, ಮಳೆಯಲ್ಲೂ ಕೂಡ ಅಲುಗಾಡದೆ ಕುಳಿತರು, ಲಕ್ಷ ಲಕ್ಷ ಜನರು.
ಅಹಿಂಸಾತ್ಮಕವಾಗಿ.
ಈ ಐತಿಹಾಸಿಕ 2021ರ ಆಂದೋಲನವನ್ನು ಇಡೀ ಜಗತ್ತೇ ನಿಬ್ಬೆರಗಾಗಿ ನೋಡಿತು. ಈ ಆಂದೋಲನದ ಸತ್ವಕ್ಕೆ ಜಗತ್ತು ಸ್ಪಂದಿಸಿತು. ಆದರೆ ಕೇಂದ್ರ ಸರಕಾರ ಕಣ್ಣೆತ್ತೂ ನೋಡಲಿಲ್ಲ. ಕೇಂದ್ರ ಸರಕಾರವು ಸಂಚು-ವಂಚನೆ ಮಾಡುತ್ತಲೇ ಬಂತು. ಅಷ್ಟೇ ಅಲ್ಲ, ಕೊಡಬಾರದ ಕಷ್ಟ ಕೋಟಲೆ ಕೊಟ್ಟಿತು. ರಸ್ತೆಗಳಿಗೆ ಮೊಳೆ ಹೊಡೆದರು. ಸಿಮೆಂಟ್ ಗೋಡೆ ಕಟ್ಟಿ ಬಂದ್ ಮಾಡಿದರು. ಚಳವಳಿಗಾರರ ಮೇಲೆ ಜಲ ಫಿರಂಗಿ ಬಳಸಿದರು. ಟೆಂಟೊಳಗೆ ಅನಾಮಧೇಯರನ್ನು ನುಗ್ಗಿಸಿ ದಾಂಧಲೆ ಎಬ್ಬಿಸಿದರು. ವಿದ್ಯುತ್, ನೀರು, ಇಂಟರ್‌ನೆಟ್‌ಗಳನ್ನೂ ಕಡಿತ ಗೊಳಿಸಲಾಯಿತು! ಒಂದೆರಡಲ್ಲ. ಇದೆಲ್ಲವನ್ನು ನೋಡಿದರೆ, ಕೇಂದ್ರ ಸರಕಾರ ಭೀತಿಗೊಂಡು ದಿಲ್ಲಿಯನ್ನೇ ಸ್ವಯಂ ಬಂದ್ ಮಾಡಿ ಕೊಂಡಿದೆಯೇನೋ ಎಂಬಂತೆ ಗೋಚರಿಸುತ್ತಿತ್ತು.
ಸಂಯುಕ್ತ ಕಿಸಾನ್ ಮೋರ್ಚಾದ ಈ ವೀರೋಚಿತ ಅಹಿಂಸಾತ್ಮಕ ಜನಸಾಗರದ ಆಂದೋಲನವನ್ನು ನೋಡಿದರೂ ಪ್ರಧಾನಿ ಹಾಗೂ ಗೃಹಸಚಿವ ಅಮಿತ್‌ಶಾ ಅವರು ತುಟಿಪಿಟಿಕ್ಕೆನ್ನದೆ ತಂತ್ರ ಕುತಂತ್ರದಲ್ಲಿ ನಿರತರಾಗಿದ್ದರು. ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಪ್ರಧಾನಿ ಮೋದಿಯವರಿಗೆ ‘‘ಒಂದು ನಾಯಿ ಸತ್ತರೂ ನೀವು ಸಂತಾಪ ಸೂಚಿಸುತ್ತೀರಿ, ಕೃಷಿ ಹೋರಾಟದಲ್ಲಿ ಭಾಗವಹಿಸಿದ್ದ ನೂರಾರು ಜನ ಸಾವನ್ನಪ್ಪಿದ್ದಾರೆ. ಈ ಕಾನೂನು ಹಿಂದಕ್ಕೆ ತೆಗೆದುಕೊಳ್ಳಿ’’ ಎಂದು ವಿನಂತಿಸಿದ್ದಕ್ಕೆ, ಪ್ರಧಾನಿ ಮೋದಿಯವರು ‘‘ಆ ರೈತರೇನು ನನಗಾಗಿ ಸತ್ತಿದ್ದಾರೆಯೇ?’’ ಎಂದು ಕೇಳುತ್ತಾರೆ! ಅಷ್ಟೊಂದು ನಿರ್ದಯತೆ! ಇದು ಯಾಕೋ ಮನುಷ್ಯರು ಆಳ್ವಿಕೆ ಮಾಡುತ್ತಿರುವ ಸರಕಾರ ಅಲ್ಲ ಎಂದು ಅಸಹಾಯಕ ಜನಸ್ತೋಮ ಮಾತಾಡಿಕೊಳ್ಳುವಂತಾಯಿತು. ಜನರ ಆಕ್ರೋಶ ದ್ವಿಗುಣಗೊಂಡಿತು.
ಕೊನೆಗೆ? ಕ್ರೂರ ಸರ್ವಾಧಿಕಾರಿಗಳೂ ಜನರ ಆಕ್ರೋಶಕ್ಕೆ ತಲೆ ಬಾಗಿಸಲೇ ಬೇಕಾಗುತ್ತದೆ ಎಂದು ಇತಿಹಾಸ ಹೇಳುತ್ತದೆ. ಕೊನೆಗೆ ಇಲ್ಲೂ ಅದೇ ಆಯಿತು. ಪ್ರಧಾನಿ ಮೋದಿ, ಅಮಿತ್ ಶಾ ಅವರು ಜಾರಿಗೊಳಿಸಲು ಹವಣಿಸಿದ್ದ ಆ ಮೂರು ಕಾಯ್ದೆಗಳನ್ನು ಹಿಂದೆಗೆದುಕೊಳ್ಳಬೇಕಾಯಿತು. ಆ ಕಾಯ್ದೆಗಳನ್ನು ಹಿಂದೆಗೆದುಕೊಂಡರು.
ಆದರೆ ಕರ್ನಾಟಕದಲ್ಲಿ?
ಕೇಂದ್ರ ಸರಕಾರವು ತರಲು ಹವಣಿಸಿದ್ದ ಅಂತಹವೇ ಕಾಯ್ದೆಗಳನ್ನು ಕರ್ನಾಟಕ ಸರಕಾರ ಈಗಾಗಲೇ ಜಾರಿಗೊಳಿಸಿಬಿಟ್ಟಿದೆ. ಈ ಕಾನೂನುಗಳ ವಿರುದ್ಧ ಕರ್ನಾಟಕದ ನೆಲ ಈಗ ಒಂದು ನಿರ್ಣಾಯಕ ಹೋರಾಟವನ್ನು ಕೇಳುತ್ತಿದೆ.
ಅದಕ್ಕಾಗಿಯೇ ಜನಾಂದೋಲನ ಮಹಾಮೈತ್ರಿಯು ನಿಮ್ಮಲ್ಲಿಗೆ ಬಂದಿದೆ. ನಾವು ನಿಮ್ಮಿಳಗೆ ಬೆರೆತು ಒಂದಾಗಿ ಹೆಜ್ಜೆ ಇಡಲೋಸುಗ.
ಮತ್ತೆ ಮತ್ತೆ ನೆನಪಿಸಿಕೊಳ್ಳೋಣ
ಕರ್ನಾಟಕದ ಮಣ್ಣು ಇದೆಯಲ್ಲಾ ಇದು ಅನೇಕಾನೇಕ ಹೋರಾಟಗಳನ್ನು ನಡೆಸಿ ಹದಗೊಂಡ ಮಣ್ಣು ಇದು. ಈ ಮಣ್ಣಲ್ಲಿ ಆ ಹೋರಾಟಗಳ ಕಂಪನಗಳು ಇನ್ನೂ ಇದೆ. 12ನೇ ಶತಮಾನದಲ್ಲಿ ಈ ನೆಲದಲ್ಲಿ ವಚನ ಕಾರರು ನಡೆದಾಡಿದ್ದಾರೆ. ಅವರ ಹೆಜ್ಜೆ ಗುರುತುಗಳು ಬೆಳಕಾಗಿ ಈಗಲೂ ಕಾಣಿಸುತ್ತಿವೆ. ದುಡಿಯುವ ವರ್ಗ, ಯಾವುದೇ ಕಾಯಕವಾಗಿರಲಿ ಮೇಲು ಕೀಳೆನ್ನದೆ ಸಮಾನರಾಗಿ ಈ ಐಹಿಕ ಬದುಕಲ್ಲಿ ಮಹೋನ್ನತ ಆಧ್ಯಾತ್ಮಿಕ ಸ್ತರ ತಲುಪಿದ ವಚನ ಕಾಲಮಾನದ ಈ ಉದಾಹರಣೆ ಭೂಮಿ ಮೇಲೆ ಬಹುಶಃ ಎಲ್ಲೂ ಇರಲಾರದು. ಈ ಬೆಳಕು ನಮ್ಮ ಮುಂದಿದೆ. ಜೊತೆಗೆ ಕರ್ನಾಟಕದ ಈ ಮಣ್ಣಲ್ಲಿ ಅನೇಕಾನೇಕ ಸಾಧು ಸಂತರು, ತಪಸ್ವಿಗಳು, ಸೂಫಿ ಸಂತರು, ತತ್ವಪದಕಾರರು ಈ ಕರ್ನಾಟಕದ ನೆಲವನ್ನು ಉಳುಮೆ ಮಾಡಿದ್ದಾರೆ .
‘ಮನುಷ್ಯಜಾತಿ ತಾನೊಂದೇ ವಲಂ’ ಎಂದ ಪಂಪ, ‘ಸರ್ವಜನಾಂಗದ ಶಾಂತಿಯ ತೋಟ’ ಎಂದ ಕುವೆಂಪು ಅವರ ನುಡಿಗಳು ಇಲ್ಲಿ ಅನುರಣಿಸುತ್ತಿವೆ. ಕರ್ನಾಟಕ ಚರಿತ್ರೆಯು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಾರುತ್ತಲಿದೆ. ಇದನ್ನೆಲ್ಲಾ ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳೋಣ. ಈ ಬೆಳಕಲ್ಲಿ, ಕಟ್ಟೋಣ ನಾವು ಹೊಸ ನಾಡೊಂದನು. ಇದಕ್ಕಾಗಿಯೇ ಜನಾಂದೋಲನಗಳ ಮಹಾಮೈತ್ರಿ ಜಾಥಾ.
ಈಗ ಎಲ್ಲರೂ ಜೊತೆಗೂಡಿ, ಒಟ್ಟಾಗಿ ಹೆಜ್ಜೆ ಹಾಕೋಣ, ಈಗ ಜನಾಂದೋಲನಗಳ ಮಹಾಮೈತ್ರಿ ನಡಿಗೆಯನ್ನು ನೀವು ನಾವು ಎಲ್ಲರೂ ಸೇರಿ ಮುನ್ನಡೆಸೋಣ.... ಹೀಗೆ ಜನಸಮುದಾಯವೇ ಜನಾಂದೋಲನ ಮಹಾಮೈತ್ರಿಯನ್ನು ಮುನ್ನಡೆಸಿದರೆ, ಆಗ, ಈ ನೆಲದಲ್ಲಿ ಸಾಂಘಿಕ ಶಕ್ತಿ ಹೊಮ್ಮುತ್ತದೆ. ಆಗ ಸಮುದಾಯದ ಮಾತುಗಳು ಶಾಸನವಾಗುತ್ತದೆ. ದುಡಿಯುವ ವರ್ಗ ಉಸಿರಾಡುವಂತಾಗುತ್ತದೆ. ಈ ಹಿಂದೆ ಕಾರ್ಮಿಕ ಪರವಾಗಿದ್ದ 44 ಕಾಯ್ದೆಗಳನ್ನು ಈಗ ಕೇಂದ್ರ ಸರಕಾರವು ‘ಮಾಲಕ ಸ್ನೇಹಿ’ 4 ಕೋಡ್‌ಗಳನ್ನಾಗಿಸಿ ಎಲ್ಲೆಲ್ಲಿ ಜಾರಿ ಮಾಡಲಾಗಿದೆಯೋ, ಅಲ್ಲೆಲ್ಲಾ ಕಾರ್ಮಿಕರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಈ ನಡುವೆ ಬೆಲೆ ಏರಿಕೆ ಅದರಲ್ಲೂ ಪೆಟ್ರೋಲ್, ಗ್ಯಾಸ್, ಅಡುಗೆ ಎಣ್ಣೆ, ಕಾಳು-ಕಡ್ಡಿ ಮುಂತಾದ ಜನಜೀವನದ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ತಪ್ಪಿದಂತೆ ಏರುತ್ತಾ, ದಿನನಿತ್ಯದ ಜನಜೀವನವನ್ನು ಬೇಯಿಸುತ್ತಿದೆ. ಇಂತಹ ಎಲ್ಲಾ ಸಮಸ್ಯೆಗಳಿಗೂ ಉಳಿದಿರಬಹುದಾದ ಪರಿಹಾರವೆಂದರೆ ನಾವೆಲ್ಲರೂ ಒಗ್ಗೂಡಿ ಸಾಂಘಿಕ ಶಕ್ತಿಯಾಗಿ ಹೊಮ್ಮಬೇಕು. ಇದಾದರೆ ಇಂತಹ ಎಲ್ಲಾ ಸಮಸ್ಯೆಗಳೂ ಆ ಸಾಂಘಿಕ ಶಕ್ತಿಯ ಪ್ರಭಾವಳಿಯಲ್ಲಿ ಬಗೆಹರಿಯುವುದು ಕಷ್ಟ ಆಗುವುದಿಲ್ಲ. ಹಾಗೆಯೇ ಇಂದಿನ ಗುತ್ತಿಗೆ ಪದ್ಧತಿ ಕೂಡ ಬದಲಾಗುತ್ತದೆ. ಗುತ್ತಿಗೆ ಅಂದರೆ - ಅದು ಗ್ಯಾರಂಟಿ ಇಲ್ಲದ ಕೆಲಸ, ಅದು. ಗ್ಯಾರಂಟಿ ಇಲ್ಲದ ಬದುಕು. ಬೇಕಾದಾಗ ಬಳಸಿ ಬೇಡವಾದಾಗ ಎಸೆಯುವ ಸಂಸ್ಕೃತಿ, ಈ ಸಂಸ್ಕೃತಿಯೂ ತೊಲಗುತ್ತದೆ. ಹಾಗೆಯೇ, ಆರೋಗ್ಯ, ಶಿಕ್ಷಣ ಎಲ್ಲವೂ ಎಲ್ಲವೂ ಸಮುದಾಯದ ಸಾಂಘಿಕ ಶಕ್ತಿಯ ಪ್ರಭಾವಳಿಯಲ್ಲಿ ಜೀವ ಪಡೆಯುತ್ತವೆ. ಅದಕ್ಕಾಗಿ, ಎಲ್ಲರೂ ಜೊತೆಗೂಡಿ, ಒಟ್ಟಾಗಿ ಹೆಜ್ಜೆ ಹಾಕೋಣ. ಈಗ, ಜನಾಂದೋಲನಗಳ ಮಹಾಮೈತ್ರಿ ನಡಿಗೆಯನ್ನು ನೀವು ನಾವು ಎಲ್ಲರೂ ಸೇರಿ ಮುನ್ನಡೆಸೋಣ....







