ಭಯೋತ್ಪಾದಕರಿಗೆ ಆರ್ಥಿಕ ನೆರವು: ಬೂದು ಪಟ್ಟಿಯಲ್ಲಿಯೇ ಉಳಿದ ಪಾಕಿಸ್ತಾನ
ಇಸ್ಲಮಾಬಾದ್: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ನಿಗಾ ವಹಿಸುವ ಜಾಗತಿಕ ಸಂಸ್ಥೆ ಎಫ್ಎಟಿಎಫ್, ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವ ಬೂದುಪಟ್ಟಿಯಲ್ಲಿಯೇ ಪಾಕಿಸ್ತಾನವನ್ನು ಮುಂದುವರಿಸಿದ್ದು, ತನ್ನ ಆರ್ಥಿಕ ವ್ಯವಸ್ಥೆಯಲ್ಲಿ ಉಳಿದಿರುವ ಕೊರತೆಗಳ ಬಗ್ಗೆ ತಕ್ಷಣ ಗಮನ ಹರಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
2018ರಿಂದಲೂ ಪಾಕಿಸ್ತಾನವು ಪ್ಯಾರಿಸ್ ಮೂಲದ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್(ಎಫ್ಎಟಿಎಫ್)ನ ಬೂದುಪಟ್ಟಿಯಲ್ಲಿಯೇ ಮುಂದುವರಿದಿದೆ. ಉಗ್ರರಿಗೆ ಆರ್ಥಿಕ ನೆರವು ಒದಗಿಸಲು ಪೂರಕವಾದ ಹಣದ ಅಕ್ರಮ ಸಾಗಾಣಿಕೆಯನ್ನು ತಡೆಯಲು ಪಾಕಿಸ್ತಾನ ವಿಫಲವಾಗಿದೆ ಎಂದು ಹೇಳಿದ್ದ ಎಫ್ಎಟಿಎಫ್, 2019ರ ಅಕ್ಟೋಬರ್ ತಿಂಗಳಿಗೂ ಮುನ್ನ ಪೂರ್ಣಗೊಳಿಸುವ ಒಂದು ಕಾರ್ಯ ಯೋಜನೆಯನ್ನು ಸೂಚಿಸಿತ್ತು. ಇದನ್ನು ಪೂರ್ಣಗೊಳಿಸಲು ವಿಫಲವಾದ ಪಾಕಿಸ್ತಾನ ಬೂದುಪಟ್ಟಿಯಲ್ಲಿಯೇ ಮುಂದುವರಿದಿದೆ.
ಎಫ್ಎಟಿಎಫ್ ಸೂಚಿಸಿದ 34 ಕ್ರಿಯಾಯೋಜನೆಯಲ್ಲಿ 32ನ್ನು ಪೂರ್ಣಗೊಳಿಸಿರುವುದರಿಂದ ತನ್ನನ್ನು ಬೂದುಪಟ್ಟಿಯಿಂದ ಹೊರಗಿರಿಸಬೇಕು ಎಂಬ ಪಾಕಿಸ್ತಾನದ ಪ್ರತಿಪಾದನೆಯನ್ನು ತಳ್ಳಿಹಾಕಿರುವ ಸಂಸ್ಥೆ, ಉಳಿದಿರುವ 2 ಪ್ರಮುಖ ಅಂಶಗಳನ್ನು ತಕ್ಷಣ ಪೂರ್ಣಗೊಳಿಸುವಂತೆ ಸೂಚಿಸಿದೆ.
ಭಯೋತ್ಪಾದಕರಿಗೆ ಆರ್ಥಿಕ ನೆರವು ಒದಗಿಸುವವರ ವಿರುದ್ಧ ತನಿಖೆ ನಡೆಸುವುದು ಮತ್ತು ವಿಶ್ವಸಂಸ್ಥೆ ನಿಯೋಜಿಸಿರುವ ಭಯೋತ್ಪಾದಕ ಗುಂಪುಗಳ ಮುಖ್ಯಸ್ಥರು ಹಾಗೂ ಮೋಸ್ಟ್ ವಾಂಟೆಡ್ ಉಗ್ರರ ವಿರುದ್ಧ ಪ್ರಕರಣ ಜರಗಿಸಿ ಕ್ರಮ ಕೈಗೊಳ್ಳುವುದು ಈ 2 ಪ್ರಮುಖ ಅಂಶವಾಗಿದೆ ಎಂದು ಹೇಳಿದೆ.
2021ರ ಜೂನ್‌ನಿಂದ ಪಾಕಿಸ್ತಾನ ಹಲವು ಕ್ಷಿಪ್ರ ಕ್ರಮಗಳನ್ನು ಕೈಗೊಂಡಿದೆ. ಹಣ ಅಕ್ರಮ ಸಾಗಾಣಿಕೆ ಪ್ರಕರಣಗಳ ತನಿಖೆ ಮತ್ತು ಕಾನೂನು ಕ್ರಮಗಳನ್ನು ಅನುಸರಿಸುವ ಧನಾತ್ಮಕ ಮತ್ತು ನಿರಂತರ ಪ್ರವೃತ್ತಿಯನ್ನು ಪ್ರದರ್ಶಿಸುವ ಮೂಲಕ ಪಾಕಿಸ್ತಾನವು ತನ್ನ 2021ರ ಕ್ರಿಯಾಯೋಜನೆಯಲ್ಲಿ ಉಳಿದಿರುವ ಒಂದು ವಿಷಯವನ್ನು ಇತ್ಯರ್ಥಪಡಿಸಲು ಕಾರ್ಯನಿರ್ವಹಿಸಬೇಕು ಎಂದು ಎಫ್ಎಟಿಎಫ್ ವರದಿ ಹೇಳಿದೆ.





