ನಕಲಿ ಛಾಪಾಕಾಗದ ಹಗರಣ ಬೆಳಕಿಗೆ ತಂದ ಸಾಮಾಜಿಕ ಕಾರ್ಯಕರ್ತನ ಮೇಲೆ ದಾಳಿ

ಬೆಳಗಾವಿ: ಎರಡು ದಶಕದ ಹಿಂದೆ ನಕಲಿ ಛಾಪಾಕಾಗದ ಹಗರಣ ಬೆಳಕಿಗೆ ಬಂದು, ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳನ್ನು ಉಳಿಸಲು ಕಾರಣವಾದ ಸಾಮಾಜಿಕ ಕಾರ್ಯಕರ್ತ ಜಯಂತ್ ಮುಕುಂದ್ ತಿನೇಕರ್ ಮೇಲೆ ಶನಿವಾರ ದಾಳಿ ನಡೆದಿದೆ ಎಂದು timesofindia ವರದಿ ಮಾಡಿದೆ.
ಈ ದಾಳಿಗೆ ಏನು ಕಾರಣ ಎನ್ನುವುದನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಎಂಟು ಮಂದಿಯ ಮುಸುಕುಧಾರಿಗಳ ಗುಂಪು ಕಬ್ಬಿಣದ ರಾಡ್‍ನಿಂದ 62 ವರ್ಷದ ತಿನೇಕರ್ ಮೇಲೆ ಹಲ್ಲೆ ನಡೆಸಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಎಂ.ಬಿ.ಬೋರಲಿಂಗಯ್ಯ ಹೇಳಿದ್ದಾರೆ. ತಿನೇಕರ್ ಮೇಲೆ ಗಂಭೀರ ಹಲ್ಲೆ ನಡೆಸಿ ಹಲ್ಲೆಕೋರರು ಪರಾರಿಯಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಬಳಿಕ ಲಾರಿ ಚಾಲಕರು ಗಾಯಾಳುವನ್ನು ಬೆಳಗಾವಿ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದು, ತಿನೇಕರ್ ಅವರ ಆರೋಗ್ಯಸ್ಥಿತಿ ಗಂಭೀರವಾಗಿದೆ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಖಾನಾಪುರ- ಬೆಳಗಾವಿ ಹೆದ್ದಾರಿಯಲ್ಲಿ ಅವರ ವಾಹನವನ್ನು ಬೆನ್ನಟ್ಟಿಕೊಂಡು ಬಂದು ಈ ಗುಂಪು ಹಲ್ಲೆ ನಡೆಸಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಹಲ್ಲೆಕೋರರು ಮುಸುಕು ಹಾಕಿಕೊಂಡಿದ್ದರಿಂದ ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ತಿನೇಕರ್ ಅವರ ಎಡ ಹಾಗೂ ಬಲ ಪಾದಗಳು ಮುರಿದಿವೆ. ತಲೆ ಮತ್ತು ಭುಜಕ್ಕೂ ಗಂಭೀರ ಗಾಯಗಳಾಗಿವೆ. ಮೊದಲು ಖಾನಾಪುರ ಸರ್ಕಾರಿ ಆಸ್ಪತ್ರೆಗೆ ಅವರನ್ನು ಸೇರಿಸಲಾಗಿದ್ದು, ಬಳಿಕ ಅಲ್ಲಿಂತ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದು ವಿವರ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬಹುಕೋಟಿ ನಕಲಿ ಛಾಪಾಕಾಗದ ಹಗರಣವನ್ನು ತಿನೇಕರ್ 2001ರಲ್ಲಿ ಮೊದಲ ಬಾರಿಗೆ ಬೆಳಕಿಗೆ ಬಂದಿದ್ದರು. ಪ್ರಕರಣದ ತನಿಖೆ ನಡೆಸಿದ ಬಳಿಕ ದಂಧೆಯಲ್ಲಿ ಷಾಮೀಲಾದ 400 ಮಂದಿಯನ್ನು ಜೈಲಿಗೆ ಕಳುಹಿಸಿ 4000 ಕೋಟಿ ರೂಪಾಯಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.







