ಮನೆ ತಲುಪಿದ ಉಕ್ರೇನ್ ನಲ್ಲಿ ಸಿಲುಕಿದ್ದ ಉಜಿರೆಯ ಹೀನಾ ಫಾತಿಮಾ

ಮಂಗಳೂರು, ಮಾ.6: ಯುದ್ಧಬಾಧಿತ ಉಕ್ರೇನ್ ನಲ್ಲಿ ಸಿಲುಕಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಟಿ.ಬಿ.ಕ್ರಾಸ್ ನಿವಾಸಿಯಾಗಿರುವ ದಿ.ಯಾಸೀನ್ ಮತ್ತು ಶಹನಾ ದಂಪತಿಯ ಪುತ್ರಿ, ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ರವಿವಾರ ಬೆಳಗ್ಗೆ ತವರೂರು ತಲುಪಿದ್ದಾರೆ.
ಉಕ್ರೇನ್ ಗಡಿ ದಾಟಿ ಪೋಲ್ಯಾಂಡ್ ತಲುಪಿದ್ದ ಹೀನಾ ಶುಕ್ರವಾರ ರಾತ್ರಿ ಪೋಲಂಡ್ ವಿಮಾನ ನಿಲ್ದಾಣದಿಂದ ಹೊರಟವರು ಶನಿವಾರ ಬೆಳಗ್ಗೆ 7 ಗಂಟೆಗೆ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿ ವಿಶ್ರಾಂತಿ ಪಡೆದು ಬಳಿಕ ರಾತ್ರಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದರು. ರವಿವಾರ ಬೆಳಗ್ಗೆ 7:20ಕ್ಕೆ ಬೆಂಗಳೂರಿನಿಂದ ಹೊರಟು ಮಂಗಳೂರು ವಿಮಾನ ನಿಲ್ದಾಣಕ್ಕೆ 8:22ಕ್ಕೆ ಬಂದಿಳಿದರು. ಈ ವೇಳೆ ಅವರನ್ನು ಕುಟುಂಬಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು.
ಸದ್ಯ ಸಂಬಂಧಿಕರ ಮನೆಗೆ ತೆರಳಿದ ಹೀನಾ ಫಾತಿಮಾ ನಂತರ ಉಜಿರೆಯ ಮನೆಗೆ ಬರಲಿದ್ದಾರೆ ಎಂದು ವೈದ್ಯ ವಿದ್ಯಾರ್ಥಿನಿಯ ತಾಯಿ ಶಹನಾ ತಿಳಿಸಿದ್ದಾರೆ.