ರಷ್ಯಾದಲ್ಲಿ ಅಮೆರಿಕದ ಮಾಜಿ ಒಲಿಂಪಿಕ್ ಬಾಸ್ಕೆಟ್ ಬಾಲ್ ಚಾಂಪಿಯನ್ ಬಂಧನ

ಬ್ರಿಟ್ನಿ ಗ್ರಿನೆರ್ (Photo: instagram.com/brittneyyevettegriner)
ಮಾಸ್ಕೊ: ಅಮೆರಿಕದ ಬಾಸ್ಕೆಟ್ಬಾಲ್ ತಾರೆ, ಎರಡು ಬಾರಿಯ ಒಲಿಂಪಿಕ್ ಚಿನ್ನದ ಪದಕ ವಿಜೇತ ಮತ್ತು ಡಬ್ಲ್ಯುಎನ್ಬಿಎ ಚಾಂಪಿಯನ್ ಬ್ರಿಟ್ನಿ ಗ್ರಿನೆರ್ ಅವರನ್ನು ರಷ್ಯಾ ಬಂಧಿಸಿದೆ. ತಮ್ಮ ಲಗೇಜ್ನಲ್ಲಿ ಗಾಂಜಾ ತುಂಬಿದ್ದ ಕ್ಯಾಟ್ರಿಡ್ಜ್ (ವೇಪ್ ಕ್ಯಾಟ್ರಿಡ್ಜ್) ಹೊಂದಿದ್ದ ಆರೋಪದಲ್ಲಿ ಈ ಖ್ಯಾತ ಕ್ರೀಡಾಪುಟುವನ್ನು ಬಂಧಿಸಲಾಗಿದೆ.
ಉಕ್ರೇನ್ ಮೇಲೆ ರಷ್ಯಾ ಅತಿಕ್ರಮಣದ ಹಿನ್ನೆಲೆಯಲ್ಲಿ ಮಾಸ್ಕೊ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವಿನ ಸಂಬಂಧ ಬಿಗಡಾಯಿಸಿರುವ ಬೆನ್ನಲ್ಲೇ ರಷ್ಯಾದ ಫೆಡರಲ್ ಕಸ್ಟಮ್ಸ್ ಸರ್ವೀಸಸ್, ಬ್ರಿಟ್ನಿ ಬಂಧನದ ಸುದ್ದಿಯನ್ನು ಪ್ರಕಟಿಸಿದೆ.
ಗ್ರಿನರ್ ಅವರನ್ನು ಎಷ್ಟು ದಿನದಿಂದ ಕಸ್ಟಡಿಯಲ್ಲಿ ಇರಿಸಲಾಗಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಫೆಬ್ರುವರಿಯಲ್ಲಿ ಬ್ರಿಟ್ನಿ ಬಂಧನ ನಡೆದಿದೆ ಎಂದಷ್ಟೇ ಏಜೆನ್ಸಿ ಹೇಳಿದೆ.
ನ್ಯೂಯಾರ್ಕ್ನಿಂದ ಆಗಮಿಸಿದ ಅಮೆರಿಕ ಪ್ರಜೆಯ ಲಗೇಜ್ನಲ್ಲಿ ಗಾಂಜಾ ಮತ್ತು ನಿರ್ದಿಷ್ಟ ವಾಸನೆಯ ದ್ರವ ಇದ್ದುದು ದೃಢಪಟ್ಟಿದೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ದ್ರವ ಹಾಶಿಶ್ ಆಯಿಲ್ ಎನ್ನುವುದನ್ನು ತಜ್ಞರು ದೃಢಪಡಿಸಿದ್ದಾರೆ. ಇದನ್ನು ಒಯ್ಯುವ ಆರೋಪಕ್ಕೆ 5 ರಿಂದ 10 ವರ್ಷದ ವರೆಗೆ ಜೈಲುಶಿಕ್ಷೆ ವಿಧಿಸಬಹುದಾಗಿದೆ.
ಬಂಧಿತ ಮಹಿಳೆಯ ಗುರುತನ್ನು ಹೇಳಿಕೆಯಲ್ಲಿ ಬಹಿರಂಗಪಡಿಸಿಲ್ಲ. ಆದರೆ ಅಮೆರಿಕದ ಎರಡು ಬಾರಿಯ ಒಲಿಂಪಿಕ್ ಬಾಸ್ಕೆಟ್ಬಾಲ್ ಚಾಂಪಿಯನ್ ಮತ್ತು ಡಬ್ಲ್ಯುಎನ್ಬಿಎ ಆಟಗಾರ್ತಿ ಎಂದು ಸ್ಪಷ್ಟಪಡಿಸಿದೆ.







