ಮೊದಲ ಟೆಸ್ಟ್ ಪಂದ್ಯಾಟ: ಶ್ರೀಲಂಕಾ ತಂಡವನ್ನು ಆಲೌಟ್ ಮಾಡಿದ ಭಾರತಕ್ಕೆ ಭರ್ಜರಿ ಮುನ್ನಡೆ
5 ವಿಕೆಟ್ ಪಡೆದು ಮಿಂಚಿದ ರವೀಂದ್ರ ಜಡೇಜಾ

Photo: Twitter
ಮೊಹಾಲಿ: ಇಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯಾಟದ ಮೂರನೇ ದಿನದ ಅಂತ್ಯಕ್ಕೆ ಭಾರತ ತಂಡವು ಶ್ರೀಲಂಕಾ ತಂಡವನ್ನು 174 ರನ್ ಗಳಿಗೆ ಆಲೌಟ್ ಮಾಡಿದೆ. ಮೊದಲ ಇನ್ನಿಂಗ್ಸ್ ನ ಬ್ಯಾಟಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ರವೀಂದ್ರ ಜಡೇಜಾ 5 ವಿಕೆಟ್ ಗಳನ್ನೂ ಕಬಳಿಸಿ ತಮ್ಮ ಆಲ್ ರೌಂಡರ್ ಪ್ರದರ್ಶನದ ಮೂಲಕ ಮಿಂಚಿದ್ದಾರೆ. ಈ ಮೂಲಕ ಭಾರತ ತಂಡ 400 ರನ್ ಗಳ ಭಾರೀ ಮುನ್ನಡೆ ಪಡೆದಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ರವೀಂದ್ರ ಜಡೇಜಾರ 175 ರನ್, ರಿಶಭ್ ಪಂತ್ 96 ರನ್ ಗಳ ನೆರವಿನಿಂದ ಭಾರತ ತಂಡ ಒಟ್ಟು 8 ವಿಕೆಟ್ ಗಳ ನಷ್ಟಕ್ಕೆ 574 ರನ್ ಗಳನ್ನು ಗಳಿಸಿ ಡಿಕ್ಲೇರ್ ಮಾಡಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ, ನಿಸ್ಸಂಕಾ (61) ರನ್ ಗಳ ನೆರವಿನೊಂದಿಗೆ ಕೇವಲ 174 ರನ್ ಗಳಿಸಲಷ್ಟೇ ಶಕ್ತವಾಯಿತು. ಬೌಲಿಂಗ್ ನಲ್ಲಿ ರವೀಂದ್ರ ಜಡೇಜಾ 5 ವಿಕೆಟ್ ಗಳನ್ನು ಪಡೆದು ಮಿಂಚಿದರೆ, ಜಸ್ಪ್ರೀತ್ ಬುಮ್ರಾ ಮತ್ತು ಆರ್. ಅಶ್ವಿನ್ ತಲಾ 2 ವಿಕೆಟ್ ಗಳನ್ನು ಪಡೆದರು.
ಸದ್ಯ ಶ್ರೀಲಂಕಾ ಫಾಲೋ ಆನ್ ನಲ್ಲಿದ್ದು, ಊಟದ ವಿರಾಮದ ಸಂದರ್ಭ ಎರಡನೇ ಇನ್ನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 10 ರನ್ ಗಳನ್ನು ಗಳಿಸಿದೆ.