ರವಿ ಕಕ್ಯೆಪದವುಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ
* ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ

ಮಂಗಳೂರು, ಮಾ.7: ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪತ್ರಿಕಾ ಭವನ ಟ್ರಸ್ಟ್ ಸಹಯೋಗದಲ್ಲಿ ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಸಮಾಜ ಸೇವಕ ರವಿ ಕಕ್ಯೆಪದವು ಅವರಿಗೆ 'ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ- 2021' ಪ್ರದಾನ ಮಾಡಲಾಯಿತು.
ತಣ್ಣೀರುಬಾವಿ ಟ್ರೀ ಪಾರ್ಕ್ ನ ಗೆಸ್ಟ್ ಹೌಸ್ ಬಳಿ ನಡೆದ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ಉದ್ಘಾಟಿಸಿ, ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ದಿನಕರ ಇಂದಾಜೆ, ವಿದ್ಯಾಧರ ಶೆಟ್ಟಿ, ರಾಜೇಶ್ ನಾಯ್ಕ್, ಯಶವಂತ ಕಾಟಿಪಳ್ಳ, ಸತೀಶ್ ಕಲ್ಮಾಡಿ ಮತ್ತು ವೆಂಕಟೇಶ್ ಬಂಟ್ವಾಳ ಅವರಿಗೆ ಚಲನಚಿತ್ರ ನಟ ನವೀನ್ ಡಿ. ಪಡೀಲ್ 2021ನೇ ಸಾಲಿನ ಗೌರವ ಸನ್ಮಾನ ನೆರವೇರಿಸಿದರು.
ಇದೇ ವೇಳೆ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಮಂಗಳೂರು ಉಪ ಅರಣ್ಯ ಸಂರಕ್ಷಣಾಕಾರಿ ಡಾ.ವೈ.ದಿನೇಶ್ ಕುಮಾರ್, ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಕರ್ನಾಟಕ ಮಾಧ್ಯಮ ಅಕಾಡಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪತ್ರಿಕಾ ಭವನ ಟ್ರಸ್ಟ್ ನ ಅಧ್ಯಕ್ಷ ರಾಮಕೃಷ್ಣ ಆರ್., ನಿಕಟಪೂರ್ವ ಅಧ್ಯಕ್ಷ ಕೆ. ಆನಂದ ಶೆಟ್ಟಿ ಉಪಸ್ಥಿತರಿದ್ದರು.
ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಪ್ಪರಾಜ್ ಬಿ.ಎನ್. ಪ್ರಶಸ್ತಿ ವಿಜೇತರ ಪರಿಚಯ ನೀಡಿದರು. ಆತ್ಮಭೂಷಣ್ ಗೌರವ ಸನ್ಮಾನಿತರ ಪರಿಚಯ ನೀಡಿದರು. ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಇಬ್ರಾಹೀಂ ಅಡ್ಕಸ್ಥಳ ವಂದಿಸಿದರು.
ಒಂಟೆ ಸವಾರಿ ಸಂಭ್ರಮ...! ಕಲ್ಲಂಗಡಿ, ಚರುಮುರಿಗೆ ಡಿಮ್ಯಾಂಡ್...!
ತಣ್ಣೀರುವಾವಿಯ ಟೀ ಪಾರ್ಕ್ ನ ವಿಶಾಲ ಆವರಣದಲ್ಲಿ ನಡೆದ ಪ್ರೆಸ್ ಕ್ಲಬ್ ಡೇ ದಿನಾಚರಣೆಯಲ್ಲಿ ಒಂಟೆ ಸವಾರಿ ವ್ಯವಸ್ಥೆ ಆಕರ್ಷಣೀಯವಾಗಿತ್ತು. ಮಕ್ಕಳು, ಹಿರಿಯರು ಸಂತಸದಿಂದ ಒಂಟೆ ಸವಾರಿ ಮಜಾ ಅನುಭವಿಸಿದರು. ಜತೆಗೆ ಕಲ್ಲಂಗಡಿ, ಬೊಂಡ ಜ್ಯೂಸ್, ಚರುಮುರಿ, ಮಾವಿನ ಕಾಯಿ ಪಚ್ಚೊಡಿ ವ್ಯವಸ್ಥೆಗೂ ಭಾರೀ ಬೇಡಿಕೆ ವ್ಯಕ್ತವಾಯಿತು.