ಉಳ್ಳಾಲ ಉರೂಸ್ ಯಶಸ್ವಿ ನಿರ್ವಹಣೆಗೆ ದ.ಕ. ಜಿಲ್ಲಾಧಿಕಾರಿ ಪ್ರಶಂಸೆ

ಉಳ್ಳಾಲ, ಮಾ.6: ಹೆಚ್ಚು ಕಡಿಮೆ ಒಂದು ತಿಂಗಳಿನಷ್ಟು ದೀರ್ಘವಾಗಿ ನಡೆಯುವ ಉಳ್ಳಾಲ ಸೈಯದ್ ಮದನಿ ದರ್ಗಾದ 21ನೇ ಪಂಚವಾರ್ಷಿಕ ಉರೂಸ್ ನಡೆಸಲು ಕೋವಿಡ್ ಕಾರಣಕ್ಕೆ ಅನುಮತಿ ನೀಡಲು ಜಿಲ್ಲಾಡಳಿತ ಹಿಂಜರಿದಿದ್ದರೂ ಹಲವು ಪೂರ್ವ ಸಿದ್ಧತೆಯ ಮೂಲಕ ಯಾವುದೇ ರೀತಿಯ ಅಡಚಣೆಗಳಿಲ್ಲದೆ ಸುಸೂತ್ರವಾಗಿ ಉರೂಸ್ ಸಮಾಪನಗೊಂಡಿರುವುದು ಸಂತಸ ತಂದಿದೆ. ಯಶಸ್ವಿ ನಿರ್ವಹಣೆಗೆ ಕಾರಣರಾದ ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮತ್ತು ಪದಾಧಿಕಾರಿಗಳು ಹಾಗೂ ಉಳ್ಳಾಲದ ಸಮಸ್ತ ನಾಗರಿಕರು ಅಭಿನಂದನಾರ್ಹರು ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದ್ದಾರೆ.
ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಾತನಾಡಿದರು.
ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಜಿಲ್ಲಾಡಳಿತ ಅಗತ್ಯ ಸಹಕಾರವನ್ನು ಸ್ಮರಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು.
ದರ್ಗಾ ಆಡಳಿತ ಸಮಿತಿಯ ಪರವಾಗಿ ಜಿಲ್ಲಾಧಿಕಾರಿಯನ್ನು ಸ್ಮರಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.
ಯು.ಕೆ.ಮೋನು, ಹಾಜಿ ಬಾವ ಮುಹಮ್ಮದ್, ಯು.ಕೆ.ಇಲ್ಯಾಸ್, ಫಾರೂಕ್ ಉಳ್ಳಾಲ್, ಎ.ಕೆ.ಮೊಯ್ದಿನ್ ಹಾಜಿ, ಯು.ಕೆ.ಇಬ್ರಾಹಿಂ, ಅಬೂಬಕರ್ ಮುಕ್ಕಚೇರಿ, ಹಮೀದ್ ಕೋಡಿ, ಕೌನ್ಸಿಲರ್ ಜಬ್ಬಾರ್ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಯೊಂದಿಗೆ ಮಹೇಶ್ ಶಿವಮೊಗ್ಗ ಜತೆಯಲ್ಲಿದ್ದರು.
ಗ್ರಾಮಕರಣಿಕ ಪ್ರಮೋದ್ ಕುಮಾರ್, ನವನೀತ್ ದರ್ಗಾ ಸಮಿತಿಯೊಂದಿಗೆ ಸಹಕರಿಸಿದರು.
ಭಾರೀ ಜನಸ್ತೋಮ:
ಉಳ್ಳಾಲ ದರ್ಗಾ ಉರೂಸ್ ಕಾರ್ಯಕ್ರಮ ಶನಿವಾರ ಸಮಾಪ್ತಿಗೊಂಡಿದ್ದು, ಈ ಪ್ರಯುಕ್ತ ಶನಿವಾರ ರಾತ್ರಿ 8 ಗಂಟೆಗೆ ಆರಂಭಗೊಂಡ ಅನ್ನಾಹಾರ ಸಮರ್ಪಣೆ ರವಿವಾರ ರಾತ್ರಿ 10 ಗಂಟೆವರೆಗೆ ನಿರಂತರವಾಗಿ ಸಾಗಿತು. ಉರೂಸ್‌ಗೆ ಭಾರಿ ಜನಸ್ತೋಮ ಹರಿದುಬಂದಿತ್ತು.
ಒಟ್ಟು 27 ಟನ್ ಅಕ್ಕಿ, 15 ಟನ್ ಮಾಂಸ, ನಾಲ್ಕು ಟನ್ ತುಪ್ಪ ಅನ್ನಾಹಾರ ತಯಾರಿಕೆಗೆ ಬಳಸಲಾಗಿದೆ. ಸುಮಾರು ಐದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಅನ್ನಾಹಾರ ಸ್ವೀಕರಿಸಿದ್ದಾರೆ. ಆರಂಭದಲ್ಲಿ ರವಿವಾರ ಐದು ಗಂಟೆಯವರೆಗೆ ಅನ್ನಾಹಾರ ವಿತರಿಸಲು ತೀರ್ಮಾನಿಸಲಾಗಿತ್ತು. ಆದರೆ ಹೊರ ರಾಜ್ಯಗಳಿಂದ ಭಕ್ತಾಧಿಗಳು ಹರಿದು ಬರುತ್ತಿರುವುದನ್ನು ಮನಗಂಡ ಅಧ್ಯಕ್ಷ ಹಾಜಿ ಅಬ್ದುರ್ರಶೀದ್‌ರವರು ಅನ್ನಾಹಾರ ವಿತರಣೆಯನ್ನು ರಾತ್ರಿ 10 ಗಂಟೆ ಯವರೆಗೆ ವಿಸ್ತರಣೆ ಮಾಡಿದ್ದಾರೆ.
ಸ್ವಯಂ ಸೇವಕರು ಭಾರೀ ಶ್ರಮಪಟ್ಟು ನಿಯಂತ್ರಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದರು. ಈ ನಡುವೆ ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿದ್ದ ಮಹಿಳೆಯರಿಗೆ ದರ್ಗಾ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಕುಡಿಯುವ ನೀರು ವಿತರಣೆ ಮಾಡಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
