ಮತ್ತೆ ಆರ್ ಸಿ ಸ್ಮಾರ್ಟ್‍ಕಾರ್ಡ್ ವಿತರಣೆಗೆ ಸಾರಿಗೆ ಇಲಾಖೆ ನಿರ್ಧಾರ

ಬೆಂಗಳೂರು, ಮಾ. 6: ವಾಹನ ನೋಂದಣಿಗೆ ಆರ್ ಸಿ ಸ್ಮಾರ್ಟ್‍ಕಾರ್ಡ್ ಬದಲು ಕಾಗದದ ರೂಪದಲ್ಲಿ ಕಲರ್ ಜೆರಾಕ್ಸ್ ಪ್ರತಿ ಕೊಡುವ ವ್ಯವಸ್ಥೆಗೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ, ಮತ್ತೆ ಸ್ಮಾರ್ಟ್ ಕಾರ್ಡ್ ವಿತರಣೆಗೆ ನಿರ್ಧರಿಸಿದೆ.
ಆಯಾ ಆರ್ ಟಿಒ ಹಾಗೂ ಎಆರ್ ಟಿಒ ಕಚೇರಿಗಳಲ್ಲೇ ಮುದ್ರಿತವಾಗಿ ಕಾರ್ಡ್‍ಗಳನ್ನು ವಿತರಿಸಲು ಬದಲಾಗಿ ಕೇಂದ್ರೀಕೃತ ವ್ಯವಸ್ಥೆಯಡಿ ನೆಲಮಂಗಲ ಆರ್‍ಟಿಒ ಕಚೇರಿಯಲ್ಲೇ ಮುದ್ರಿಸಿ, ರಾಜ್ಯದ ಎಲ್ಲ ಕಚೇರಿಗಳಿಗೂ ಡಿಎಲ್ ಹಾಗೂ ಆರ್‍ಸಿ ಸ್ಮಾರ್ಟ್‍ಕಾರ್ಡ್‍ಗಳನ್ನು ಸರಬರಾಜು ಮಾಡಲು ವ್ಯವಸ್ಥೆ ಮಾಡಿಕೊಳ್ಳುವಂತೆ ಗುತ್ತಿಗೆ ಪಡೆದಿರುವ ರೋಸ್‍ಮರ್ಟಾ ಟೆಕ್ನಾಲಜೀಸ್ ಲಿಮಿಟೆಡ್‍ಗೆ ಸಾರಿಗೆ ಆಯುಕ್ತರು ಲಿಖಿತ ಸೂಚನೆ ನೀಡಿದ್ದಾರೆ.
ಆರ್‍ಟಿಒ ಕಚೇರಿಗಳಲ್ಲಿ ಫೇಸ್‍ಲೆಸ್ ವ್ಯವಸ್ಥೆ ಜಾರಿಗೆ ತಂದಿದ್ದ ಸಾರಿಗೆ ಇಲಾಖೆ, ಮೊದಲಿದ್ದ ಆರ್‍ಸಿ ಸ್ಮಾರ್ಟ್‍ಕಾರ್ಡ್ ವಿತರಣೆ ವ್ಯವಸ್ಥೆ ರದ್ದುಗೊಳಿಸಿ 2021ರ ನ.1ರಿಂದ ಪೇಪರ್ ಆರ್‍ಸಿ ನೀಡುವ ವ್ಯವಸ್ಥೆ ಅನುಷ್ಠಾನಕ್ಕೆ ತಂದಿತ್ತು. ಭದ್ರತೆ ದೃಷ್ಟಿಯಿಂದ ಹಾಗೂ ಇಟ್ಟುಕೊಳ್ಳಲು ಸ್ಮಾರ್ಟ್‍ಕಾರ್ಡ್ ಉಪಯುಕ್ತವಾಗುತ್ತಿತ್ತು. ಆರ್‍ಸಿ ಕಾರ್ಡ್ ಮಾಹಿತಿ ಇರುವ ಕಾಗದವನ್ನು ಜೋಪಾನ ಮಾಡುವುದೇ ಕಷ್ಟ. ನಕಲು ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಆರ್‍ಟಿಒ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.







