ಮುಳ್ಳಯ್ಯನಗಿರಿ-ಬಾಬಾಬುಡಾನ್‍ಗಿರಿ ವ್ಯಾಪ್ತಿಯಲ್ಲಿ 'ರೋಪ್ ವೇ' ಯೋಜನೆ: ಪರಸರವಾದಿಗಳಿಂದ ಭಾರೀ ವಿರೋಧ
ಪರಿಸರಕ್ಕೆ ಮಾರಕವಾದ ಯೋಜನೆ ಕೈಬಿಡಲು ಆಗ್ರಹ

ಚಿಕ್ಕಮಗಳೂರು, ಮಾ.6: ರಾಜ್ಯದ ಅತ್ಯಂತ ಎತ್ತರ ಗಿರಿಶ್ರೇಣಿಯಾಗಿರುವ ಹಾಗೂ ಉತ್ತಮ ಪ್ರವಾಸಿ ಕೇಂದ್ರವಾಗಿರುವ ಮುಳ್ಳಯ್ಯನಗಿರಿಯಿಂದ ಬಾಬಾ ಬುಡನ್‍ಗಿರಿಗೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ರೋಪ್ ವೇನಿರ್ಮಾಣಕ್ಕೆ ರಾಜ್ಯ ಸರಕಾರ ಬಜೆಟ್‍ನಲ್ಲಿ ಪ್ರಸ್ತಾವ ಇಟ್ಟಿರುವುದಕ್ಕೆ ಕಾಫಿನಾಡಿನ ಪರಿಸರವಾದಿಗಳ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸರಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಅಪಸ್ವರದ ಕೂಗೆದ್ದಿದೆ.
ಮುಳ್ಳಯ್ಯನಗಿರಿ ಹಾಗೂ ಬಾಬಾ ಬುಡನ್‍ಗಿರಿ ಪ್ರವಾಸಿತಾಣಗಳು ರಾಜ್ಯ ಮಾತ್ರವಲ್ಲದೇ ರಾಷ್ಟ್ರ ಹಾಗೂ ವಿದೇಶದಲ್ಲೂ ಹೆಸರಾದ ಪ್ರವಾಸಿತಾಣಗಳಾಗಿವೆ. ಇಂತಹ ಪ್ರವಾಸಿತಾಣಗಳು ಮೂಲಸೌಕರ್ಯಗಳ ಕೊರತೆಯಿಂದ ಹೆಚ್ಚು ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿವೆ ಎಂಬ ಆರೋಪವೂ ಇದೆ. ಈ ಕಾರಣಕ್ಕೆ ಸದ್ಯ ರಾಜ್ಯ ಸರಕಾರ ಮುಳ್ಳಯ್ಯನಗಿರಿಯಿಂದ ಬಾಬಾ ಬುಡನ್‍ಗಿರಿಗೆ ರೋಪ್ ವೇ ಸಂಪರ್ಕ ಕಲ್ಪಿಸುವ ಮೂಲಕ ದೇಶ ವಿದೇಶಗಳ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಯನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಿದೆ.
ಕೇಂದ್ರ ಸರಕಾರ ಪರ್ವತಮಾಲಾ ಯೋಜನೆಯಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ 50:50 ಅನುದಾನದಲ್ಲಿ ರೋಪ್ ವೇನಿರ್ಮಿಸಲು ಸರಕಾರ ಮುಂದಾಗಿದ್ದು, ಈ ಯೋಜನೆ ಜಾರಿಯಿಂದಾಗಿ ಪರಿಸರ ಸೂಕ್ಷ್ಮ ಪ್ರದೇಶದ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಜಿಲ್ಲೆಯ ಪರಿಸರವಾದಿಗಳು ಅಪಸ್ವರ ಎತ್ತಿದ್ದು, ಯಾವುದೇ ಕಾರಣಕ್ಕೂ ರೋಫ್ ವೇ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ಯೋಜನೆಯಿಂದ ಯಾವುದೇ ಪ್ರಯೋಜನವಿಲ್ಲ, ಜನರನ್ನು ಖುಷಿಪಡಿಸುವ ನಿಟ್ಟಿನಲ್ಲಿ ಈ ಸಾಹಸಕ್ಕೆ ಸರಕಾರ ಕೈ ಹಾಕಿದಂತಿದ್ದು, ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಟೀಕಿಸಿದ್ದಾರೆ.
ಪಶ್ಚಿಮಘಟ್ಟ ಪರ್ವತ ಶ್ರೇಣಿಗಳು ಹಿಮಾಲಯಕ್ಕಿಂತಲ್ಲೂ ಹಳೆಯದು ಎನ್ನಲಾಗುತ್ತಿದ್ದು, ಪಶ್ಚಿಮಘಟ್ಟ ದೇಶದ ಪರಿಸರದ ಬೆನ್ನುಹುರಿ ಇದ್ದಂತೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಇಂತಹ ಪರಿಸರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಯೋಜನೆಗಳನ್ನು ಜಾರಿ ಮಾಡಿದಲ್ಲಿ ಪರಿಸರ ಅಸಮತೋಲ ಉಂಟಾಗುವುದು ನಿಶ್ಚಿತ. ಸರಕಾರ ಈ ಯೋಜನೆ ಜಾರಿಯಿಂದ ಹಿಂದೆ ಸರಿಯಬೇಕೆಂಬ ಕೂಗು ಕಾಫಿನಾಡಿನ ಪರಿಸರಾಸಕ್ತರಿಂದ ವ್ಯಕ್ತವಾಗುತ್ತಿದೆ.
ಮುಳ್ಳಯ್ಯನಗಿರಿ ಪರ್ವತ ಶ್ರೇಣಿ ದಕ್ಷಿಣ ಭಾರತದಲ್ಲೇ ಅತ್ಯಂತ ಎತ್ತರದ ಪ್ರದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಪರಿಸರ ಸೊಬಗು ಎಲ್ಲರನ್ನು ಆಕರ್ಷಿಸುತ್ತದೆ. ಇಷ್ಟು ಮಾತ್ರವಲ್ಲ ಇಲ್ಲಿನ ಹುಲ್ಲುಗಾವಲು ಪ್ರದೇಶ, ಅರಣ್ಯ ಪ್ರದೇಶ ಅಪಾರ ವೈವಿಧ್ಯಮಯ ವನ್ಯಜೀವಿ ಸಂಪತ್ತು, ಔಷಧ ಗುಣವುಳ್ಳ ಗಿಡಮೂಲಿಕೆಗಳನ್ನು ಒಳಗೊಂಡಿದೆ. ಯಗಚಿ ನದಿ ಸೇರಿದಂತೆ ಸಾವಿರಾರು ಹಳ್ಳ ಕೊಳ್ಳಗಳ ಉಗಮಸ್ಥಾನವೂ ಆಗಿದೆ. ಮುಳ್ಳಯ್ಯನಗಿರಿ ಹಾಗೂ ಬಾಬಾ ಬುಡನ್‍ಗಿರಿ ಈ ಕಾರಣಕ್ಕೆ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಇಂತಹ ಅಪರೂಪದ ಪರಿಸರ, ಗಿರಿಶ್ರೇಣಿಯನ್ನು ರಕ್ಷಿಸಲು ದೇಶದ ನ್ಯಾಯಾಲಯಗಳೂ ವಿವಿಧ ಅರಣ್ಯ ಯೋಜನೆಗಳ ಮೂಲಕ ಸರಕಾರದ ಮೇಲೆ ಒತ್ತಡ ಹೇರುತ್ತಿವೆ. ಮುಳ್ಳಯ್ಯಗಿರಿ ಪರ್ವತ ಶ್ರೇಣಿ ಮಳೆಗಾಲದಲ್ಲಿ ಬಿದ್ದ ನೀರನ್ನು ತಡೆದು ತನ್ನೊಡಲಿನಲ್ಲಿ ಇಂಗಿಸಿಕೊಳ್ಳುವುದರಿಂದ ಅಂತರ್ಜಲ ಮಟ್ಟವು ಏರಿಕೆಯಾಗುತ್ತದೆ. ಸಾವಿರಾರು ಪ್ರಬೇಧದ ಪ್ರಾಣಿ ಪಕ್ಷಿಗಳ ವಾಸಸ್ಥಳವಾಗಿದೆ. ಇಂತಹ ಪರಿಸರದಲ್ಲಿ ರೋಪ್ ವೇ ನಿರ್ಮಾಣದಿಂದ ಇಲ್ಲಿನ ಸೂಕ್ಷ್ಮ ಪ್ರದೇಶ ಹಾಗೂ ವನ್ಯಜೀವಿಗಳ ಸ್ವಚ್ಛಂದ ಬದುಕಿಗೆ ಧಕ್ಕೆಯಾಗಲಿದೆ. ಇದನ್ನು ಮನಗಂಡು ಸರಕಾರ ಈ ಯೋಜನೆಯನ್ನು ಹಿಂಪಡೆಯಬೇಕೆಂದು ಪರಿಸರವಾದಿಗಳು ಆಗ್ರಹಿಸುತ್ತಿದ್ದಾರೆ.
ರೋಪ್ ವೇ ನಿರ್ಮಾಣಕ್ಕೆ ಗಿರಿಶ್ರೇಣಿಗಳನ್ನು ಅಗೆಯುವದರಿಂದ ಗಿರಿಶ್ರಣೀಗಳಲ್ಲಿ ಭೂಕುಸಿತ ಉಂಟಾಗುತ್ತದೆ. ರೋಪ್ ವೇ ಸಂಚಾರಕ್ಕೆ ಯಂತ್ರಗಳನ್ನು ಅಳವಡಿಸುವದರಿಂದ ಭಾರೀ ಶಬ್ಧದಿಂದ ವನ್ಯಜೀವಿಗಳ ಆವಾಸ ಸ್ಥಾನಕ್ಕೆ ತೊಂದರೆಯಾಗುತ್ತದೆ. ಮುಳ್ಳಯ್ಯನಗಿರಿ ಹಾಗೂ ಬಾಬಾ ಬುಡನ್‍ಗಿರಿ ಮಾರ್ಗದಲ್ಲಿ ಸಾವಿರಾರು ರೆಸಾರ್ಟ್, ಹೋಮ್‍ಸ್ಟೇಗಳಿಂದಾಗಿ ಈಗಾಗಲೇ ಪರಿಸರ ನಾಶವಾಗಿರುವುದಲ್ಲದೇ, ಪರಿಸರಕ್ಕೆ ಭಾರೀ ಪ್ರಮಾಣದಲ್ಲಿ ತ್ಯಾಜ್ಯವನ್ನೂ ಹಾಕಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಸುರಿದ ಭಾರೀ ಮಳೆಗೆ ಬೆಟ್ಟಗುಡ್ಡಗಳು ಕುಸಿದಿದ್ದು, ಅದನ್ನೇ ಜಿಲ್ಲೆಯ ಜನತೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೋಪ್ ವೇ ಯೋಜನೆ ಜಾರಿಯಿಂದಾಗಿ ಇಲ್ಲಿನ ಸೂಕ್ಷ್ಮ ಪರಿಸರದ ಮೇಲೆ ಭಾರೀ ದುಷ್ಪರಿಣಾಮ ಉಂಟಾಗಲಿದೆ ಎನ್ನುವುದು ಪರಿಸರವಾದಿಗಳ ತರ್ಕವಾಗಿದೆ.
ಮುಳ್ಳಯ್ಯನಗಿರಿ ಪ್ರದೇಶ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಪ್ರವಾಸಿಗರಿಂದಾಗಿ ಈಗಾಗಲೇ ಇಲ್ಲಿನ ಪರಿಸರ ನಾಶವಾಗುತ್ತಿದೆ. ಇಂತಹ ಪರಿಸರದಲ್ಲಿ ರೋಪ್ ವೇನಿರ್ಮಾಣದಿಂದ ಯಾವ ಪ್ರಯೋಜನವೂ ಇಲ್ಲ. ಇದರಿಂದ ಇಲ್ಲಿನ ವೈವಿಧ್ಯ ಪರಿಸರ ಹಾಗೂ ವನ್ಯಜೀವಿ, ಶೋಲಾ ಕಾಡು, ನೀರಿನ ಮೂಲಗಳಿಗೆ ಭಾರೀ ಧಕ್ಕೆಯಾಗುತ್ತಿದೆ. ಯಾವುದೇ ಕಾರಣ್ಕಕೂ ಯೋಜನೆ ಜಾರಿಗೆ ಸರಕಾರ ಮುಂದಾಗಬಾರದು. ಯೋಜನೆ ಜಾರಿಯಾದಲ್ಲಿ ಇಲ್ಲಿನ ಪರಿಸರ ಅಸಮತೋಲನಕ್ಕೆ ನಾಂದಿ ಹಾಡಿದಂತಾಗುತ್ತದೆ.
- ಎಸ್.ಗಿರಿಜಾಶಂಕರ್, ಪರಿಸರವಾದಿ
------------------------------------------
ಮುಳ್ಳಯ್ಯನಗಿರಿ ಪ್ರದೇಶದಲ್ಲಿ ರೋಪ್ ವೇ ನಿರ್ಮಾಣ ಮಾಡುವುದು ಸಮಂಜಸವಲ್ಲ, ಇದೊಂದು ಪರಿಸರ ಸೂಕ್ಷ್ಮ ಪ್ರದೇಶ, ಇದರಿಂದ ಇಲ್ಲಿನ ಹುಲ್ಲುಗಾವಲು ಪ್ರದೇಶ ಮತ್ತು ವನ್ಯಜೀವಿಗಳಿಗೆ ತೊಂದರೆಯಾಗಲಿದೆ. ಇದರ ಬದಲು ಸರಕಾರ ತೆರದ ವಾಹನಗಳ ವ್ಯವಸ್ಥೆ ಕಲ್ಪಿಸಿ ಇಲ್ಲಿನ ಪರಿಸರವನ್ನು ಪ್ರವಾಸಿಗರು ಸವಿಯಲು ಅವಕಾಶ ಮಾಡಿಕೊಡಲಿ. ರೋಫ್ ವೇ ಯೋಜನೆ ನಮ್ಮ ವಿರೋಧವಿದೆ. ಅದನ್ನು ಜಾರಿ ಮಾಡಲು ಬಿಡುವುದಿಲ್ಲ.
- ಜಿ.ವಿರೇಶ್, ಗೌರವ ವನ್ಯಜೀವಿ ಪರಿಪಾಲಕ







