ಉಡುಪಿ ಜಿಲ್ಲೆ ನನ್ನ ತವರೂರು: ಪದ್ಮಶ್ರೀ ಮಂಜಮ್ಮ ಜೋಗತಿ

ಕುಂದಾಪುರ, ಮಾ.6: ರಾಜ್ಯದಲ್ಲಿಯೇ ಉಡುಪಿ ಜಿಲ್ಲೆಗೆ ಬಂದಷ್ಟು ಬೇರೆ ಯಾವ ಜಿಲ್ಲೆಗೂ ಹೋಗಿಲ್ಲ. ಹಾಗಾಗಿ ನಾನು ಒಂದು ರೀತಿಯಲ್ಲಿ ಉಡುಪಿಯ ಮಗಳಿದ್ದಂತೆ. ಬಳ್ಳಾರಿಯಿಂದ ಉಡುಪಿಯ ಕುಂದಾಪುರ, ಕೋಟ, ಹೆಬ್ರಿ ಸಹಿತ ಅನೇಕ ಬಾರಿ ಕಾರ್ಯಕ್ರಮಗಳಿಗಾಗಿ ಬಂದಿದ್ದೇನೆ. ಇದು ನನ್ನ ತವರೂರು ಎಂದು ಜಾನಪದ ಅಕಾಡೆಮಿಯ ಅಧ್ಯಕ್ಷೆ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಹೇಳಿದ್ದಾರೆ.
ಯಕ್ಷಕಾಶಿ ಕುಂದಾಪುರ ವತಿಯಿಂದ ಶನಿವಾರ ನೆಹರೂ ಮೈದಾನದಲ್ಲಿ ಉದ್ಯಮಿ ಮಂಜುನಾಥ್ ಪೂಜಾರಿ ಬೆಳ್ಳಾಡಿ ಸಾರಥ್ಯದಲ್ಲಿ ನಡೆದ ಅಮರಾವತಿಯ ಅಮರ ಚರಿತೆ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.
ಮಂಜಮ್ಮ ಜೋಗತಿ, ಹಿರಿಯ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ, ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಡುಪಿ ಫುಡ್ ಹಬ್‌ನ ಡಾ.ಅಶೋಕ್ ಶೆಟ್ಟಿ ಬೆಳ್ಳಾಡಿ ಅವರನ್ನು ಆನೆಯ ಮೂಲಕ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಮುಂಬಯಿನ ಆದರ್ಶ್ ಶೆಟ್ಟಿ ಹಾಲಾಡಿ, ಜಿ.ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ, ಉದ್ಯಮಿಗಳಾದ ಡಾ.ವಿಜಯಕೃಷ್ಣ ಪಡು ಕೋಣೆ, ಶರತ್ ಶೆಟ್ಟಿ ಬೆಳ್ಳಾಡಿ, ಜಗದೀಶ್ ಶೆಟ್ಟಿ ಕುದ್ರುಕೋಡ್, ಅರವಿಂದ್ ಪೂಜಾರಿ, ಸದಾಶಿವ ಪೂಜಾರಿ, ಸಂಘಟಕ ಮಂಜುನಾಥ್ ಪೂಜಾರಿ ಬೆಳ್ಳಾಡಿ ಮೊದಲಾದವರು ಉಪಸ್ಥಿತರಿದ್ದರು.
ಯಕ್ಷ ಕವಿ ಪವನ್ ಕಿರಣ್ಕೆರೆ ಪ್ರಸ್ತಾವಿಕವಾಗಿ ಮಾತನಾಡಿದರು. ಅವಿನಾಶ್ ಕಾಮತ್ ಸಮ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕ ಮಹೇಶ್ ವಕ್ವಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.