ದೇಶದ ಮೂಲ ನಿವಾಸಿಗಳು ಮನುವಾದಿಗಳ ಕುತಂತ್ರಕ್ಕೆ ಬಲಿಯಾಗಬಾರದು: ಮಾಜಿ ಸಚಿವ ಸತೀಶ್ ಜಾರಕಿಹೊಳಿ

ವಿಜಯನಗರ, ಮಾ. 6: ದೇಶದ ಮೂಲ ನಿವಾಸಿಗಳಾದ ಶೋಷಿತರು, ಹಿಂದುಳಿದವರು ಮನುವಾದಿ ಕುತಂತ್ರಕ್ಕೆ ಬಲಿಯಾಗಬಾರದು. ಈ ನಿಟ್ಟಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳನ್ನು ಪರಿಪೂರ್ಣವಾಗಿ ಅಧ್ಯಯನ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ್ ಜಾಕಕಿಹೊಳಿ ಕರೆ ನೀಡಿದ್ದಾರೆ.
ರವಿವಾರ ಇಲ್ಲಿನ ಹೊಸಪೇಟೆಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ‘ಮಾನವ ಬಂಧುತ್ವ ವೇದಿಕೆ'ಯ ವತಿಯಿಂದ ಹಮ್ಮಿಕೊಂಡಿದ್ದ ‘ಸಂವಿಧಾನ ಸಂರಕ್ಷಣಾ ಸಮಾವೇಶ'ದಲ್ಲಿ ಮಾತನಾಡಿದ ಅವರು, ಸಂವಿಧಾನ ತಿಳುವಳಿಕೆಯ ಕೊರತೆಯಿಂದ ದೇಶದಲ್ಲಿ ಇತ್ತೀಚ್ಚಿನ ದಿನಗಳಲ್ಲಿ ಕೆಲ ಕೆಟ್ಟ ಬೆಳವಣಿಗೆಗಳು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅದನ್ನು ತಡೆಯಲು ಮಾನವ ಬಂಧುತ್ವ ವೇದಿಕೆಯಿಂದ ಸದಾ ಸಂವಿಧಾನ ರಕ್ಷಣೆಯ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು.
ಉತ್ತರ ಪ್ರದೇಶ ಸೇರಿದಂತೆ ಅನೇಕ ಕಡೆ ದಲಿತರ ಮೇಲೆ ನಿರಂತರ ದಬ್ಬಾಳಿಕೆಗಳು ನಡೆಯುತ್ತಿದ್ದು, ಅವುಗಳನ್ನು ತಡೆಯಬೇಕಾದರೆ ಬುದ್ಧ, ಬಸವ, ಅಂಬೇಡ್ಕರ್ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗಿದರೆ ಮಾತ್ರ ಸಾಧ್ಯ. ಅದೇ ರೀತಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸಂವಿಧಾನ ಅಧ್ಯಯನದ ಜತೆ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಚಿವ ಈಶ್ವರಪ್ಪ ಸೇರಿದಂತೆ ಅನೇಕ ನಾಯಕರು ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದು, ಅವುಗಳನ್ನು ನಾವು ಒಪ್ಪುವುದಿಲ್ಲ. ಅಂತವರಿಗೆ ಸಂವಿಧಾನ ಮೂಲಕವೇ ತಕ್ಕಪಾಠ ಕಲಿಸಬೇಕು ಎಂದು ಸೂಚಿಸಿದರು.
ಹಿಂದುಳಿದ ವರ್ಗದಲ್ಲಿ ಮೂಡನಂಬಿಕೆಗಳು ಬೀಡು ಬಿಟ್ಟಿದ್ದು, ಅವುಗಳನ್ನು ಹೋಗಲಾಡಿಸಿ, ಶಿಕ್ಷಣ, ಸಂಘಟನೆಗೆ ಆಧ್ಯತೆ ನೀಡುವ ಮೂಲಕ ಉದ್ಯೋಗ, ಉದ್ಯಮಗಳಲ್ಲಿ ಪ್ರಗತಿ ಕಾಣುವ ಕೆಲಸವಾಗಬೇಕು. ಅದಕ್ಕೆ ಬೇಕಾದ ಸಹಕಾರವನ್ನು ಈಗಾಗಲೇ ಯುವಕರಿಗೆ ನೀಡುತ್ತಿದ್ದೇವೆ ಎಂದರು.
ಇಲಕಳ್‍ನ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಮ.ನಿ.ಪ್ರ. ಗುರುಮಹಾಂತ ಸ್ವಾಮೀಜಿ ಮಾತನಾಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನ ಕೆಳವರ್ಗಕ್ಕಷ್ಟೇ ಸೀಮಿತವಾಗಿಲ್ಲ ಎಂಬುದನ್ನು ಮೇಲ್ವರ್ಗದ ಜನ ಅರ್ಥ ಮಾಡಿಕೊಳ್ಳಬೇಕು. ಕೆಳವರ್ಗ, ಶೋಷಿತರು, ಹಿಂದುಳಿದವರು, ಬಡವರನ್ನು ಎತ್ತರದ ಸ್ಥಾನಕ್ಕೆ ಒಯ್ಯಬೇಕು ಎಂಬ ಆಶಯ ಸಂವಿಧಾನದ್ದು ಎಂದರು.
ಈ ಸಂದರ್ಭದಲ್ಲಿ ಕಂಪ್ಲಿ ಶಾಸಕ ಜೆ.ಗಣೇಶ್, ಸಾಹಿತಿ ಕುಂ.ವೀರಭದ್ರಪ್ಪ, ಚಿಂತಕ ಎ.ಅನೀಷ್ ಪಾಷಾ, ಅನಂತ ನಾಯ್ಕ್, ಇರ್ಫಾನ್ ಮುದುಗಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







