ಉಕ್ರೇನ್ ಬಿಕ್ಕಟ್ಟು: ವಿಶ್ವದಾದ್ಯಂತ ಆಹಾರ, ಇಂಧನ ಬೆಲೆ ಹೆಚ್ಚಳದಿಂದ ಜನರು ತತ್ತರಿಸಲಿದ್ದಾರೆ; ಐಎಂಎಫ್ ಎಚ್ಚರಿಕೆ

photo courtesy:twitter
ಹೊಸದಿಲ್ಲಿ,ಮಾ.6: ಉಕ್ರೇನ್ನಲ್ಲಿಯ ಯುದ್ಧದಿಂದಾಗಿ ಆರ್ಥಿಕ ಪರಿಣಾಮಗಳು ಈಗಾಗಲೇ ಅತ್ಯಂತ ಗಂಭೀರವಾಗಿವೆ. ಬೆಲೆ ಆಘಾತಗಳು ವಿಶ್ವಾದಂತ ಪರಿಣಾಮವನ್ನುಂಟು ಮಾಡಲಿವೆ. ವಿಶೇಷವಾಗಿ ಬಡ ಕುಟುಂಬಗಳು ಆಹಾರ ಮತ್ತು ಇಂಧನ ಬೆಲೆಗಳ ಹೆಚ್ಚಳದಿಂದಾಗಿ ತತ್ತರಿಸಲಿವೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯು ಎಚ್ಚರಿಕೆ ನೀಡಿದೆ.
ಶನಿವಾರ ಆಡಳಿತ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿಯೇವಾ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯ ಬಳಿಕ ಹೊರಡಿಸಿರುವ ಹೇಳಿಕೆಯಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದೆ.
ಫೆ.24ರಂದು ಆರಂಭಗೊಂಡಿದ್ದ ಉಕ್ರೇನ್ ಮೇಲಿನ ರಷ್ಯದ ಆಕ್ರಮಣವು ರವಿವಾರ 11ನೇ ದಿನಕ್ಕೆ ಕಾಲಿರಿಸಿದೆ. ಆಕ್ರಮಣವನ್ನು ಉಕ್ರೇನ್ನಲ್ಲಿ ‘ನವ ನಾಝಿ’ಗಳ ಆಡಳಿತವನ್ನು ಕಿತ್ತೊಗೆಯಲು ಕೈಗೊಳ್ಳಲಾಗಿರುವ ‘ವಿಶೇಷ ಮಿಲಿಟರಿ ಕಾರ್ಯಾಚರಣೆ ’ಎಂದು ರಷ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಣ್ಣಿಸಿದ್ದಾರೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯ ಪ್ರಕಾರ ಈವರೆಗೆ ಕನಿಷ್ಠ 351 ನಾಗರಿಕರು ಮೃತಪಟ್ಟಿದ್ದಾರೆ ಮತ್ತು ಆರು ಲಕ್ಷಕ್ಕೂ ಅಧಿಕ ಜನರು ಉಕ್ರೇನ್ ಅನ್ನು ತೊರೆದಿದ್ದಾರೆ. ರಷ್ಯದ ಕಡೆ, ಸೇನೆಯು ಹೇಳಿರುವಂತೆ ಅದರ 498ಕ್ಕೂ ಅಧಿಕ ಸೈನಿಕರು ಸಾವನ್ನಪ್ಪಿದ್ದಾರೆ.
ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಸೇರಿದಂತೆ ಹಲವಾರು ದೇಶಗಳು ರಷ್ಯದ ಮೇಲೆ ತೀವ್ರ ನಿರ್ಬಂಧಗಳನ್ನು ಹೇರಿವೆ. ಪರಿಣಾಮವಾಗಿ ಕಚ್ಚಾತೈಲ ಬೆಲೆಗಳು ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದ್ದು, ಪೂರೈಕೆ ಸರಪಳಿಗೆ ಅಡ್ಡಿಯುಂಟಾಗುವ ಭೀತಿ ಸೃಷ್ಟಿಯಾಗಿದೆ.
ರಷ್ಯದ ಮೇಲಿನ ನಿರ್ಬಂಧಗಳು ಜಾಗತಿಕ ಆರ್ಥಿಕತೆ ಮತ್ತು ಹಣಕಾಸು ಮಾರುಕಟ್ಟೆಗಳ ಮೇಲೆ ಗಣನೀಯ ಪರಿಣಾಮವನ್ನು ಬೀರಲಿವೆ ಮತ್ತು ಇತರ ದೇಶಗಳನ್ನೂ ಬಾಧಿಸಲಿವೆ ಎಂದು ಐಎಂಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬಿಕ್ಕಟ್ಟು ಹಲವಾರು ದೇಶಗಳಲ್ಲಿ ಈಗಾಗಲೇ ಹೆಚ್ಚಿನ ಬೆಲೆ ಒತ್ತಡಗಳ ನಡುವೆ ಹಣದುಬ್ಬರ ಮತ್ತು ಆರ್ಥಿಕ ಚಟುವಟಿಕೆಗೆ ಆಘಾತವನ್ನುಂಟು ಮಾಡಲಿದೆ. ಸೂಕ್ತ ಮಾಪನಾಂಕ ಪ್ರತಿಕ್ರಿಯೆಗಳನ್ನು ನಿರ್ಣಯಿಸಲು ದೇಶಿಯ ಹಣದುಬ್ಬರಕ್ಕೆ ಹೆಚ್ಚುತ್ತಿರುವ ಜಾಗತಿಕ ಬೆಲೆಗಳ ವರ್ಗಾವಣೆಯ ಮೇಲೆ ವಿತ್ತೀಯ ಅಧಿಕಾರಿಗಳು ಸೂಕ್ಷ್ಮ ನಿಗಾಯಿರಿಸುವುದು ಅಗತ್ಯವಾಗಿದೆ ಎಂದು ಅದು ತಿಳಿಸಿದೆ.
1.4 ಬಿಲಿಯನ್ ಡಾಲರ್ ಗಳ ತುರ್ತು ಆರ್ಥಿಕ ನೆರವಿಗಾಗಿ ಉಕ್ರೇನ್ ಮಾಡಿಕೊಂಡಿರುವ ಮನವಿಯನ್ನು ಅನುಮೋದಿಸುವ ಬಗ್ಗೆ ತನ್ನ ಆಡಳಿತ ಮಂಡಳಿಯು ಮುಂದಿನ ವಾರ ಚರ್ಚಿಸಲಿದೆ ಮತ್ತು ಹಣಕಾಸು ನೆರವು ಪರ್ಯಾಯಗಳ ಕುರಿತು ನೆರೆಯ ಮಾಲ್ಡೋವಾದ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದೆ ಎಂದು ಐಎಂಎಫ್ ಹೇಳಿದೆ. ರಷ್ಯ ಆಕ್ರಮಣವನ್ನು ಆರಂಭಿಸಿದ್ದ ಮರು ದಿನ, ಅಂದರೆ ಫೆ.25ರಂದು ಉಕ್ರೇನ್ ಈ ಮನವಿಯನ್ನು ಮಾಡಿಕೊಂಡಿತ್ತು.







