ಮಹಿಳೆಯರ ಹಕ್ಕುಗಳ ರಕ್ಷಣೆಗೆ ಪಟ್ಟು: ಬೆಂಗಳೂರಿನಲ್ಲಿ ಮಹಿಳಾ ಸಂಘಟನೆಗಳಿಂದ ಕಾಲ್ನಡಿಗೆ ಜಾಥಾ

ಬೆಂಗಳೂರು, ಮಾ. 6: ಮಹಿಳೆಯರ ಶೈಕ್ಷಣಿಕ ಏಳ್ಗೆ, ಘನತೆ ಮತ್ತು ಬದುಕುವ ಮೂಲಭೂತ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ ನೂರಾರು ಮಹಿಳೆಯರು ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಬೃಹತ್ ಕಾಲ್ನಡಿಗೆ ಮೆರವಣಿಗೆ ನಡೆಸಿದರು.
ರವಿವಾರ ಇಲ್ಲಿನ ವಿಠಲ್‍ಮಲ್ಯ ರಸ್ತೆ ಬಳಿ ಮಹಿಳೆಯರು, ಮಹಿಳಾ ಸಂಘಟನೆಗಳು, ಎಲ್‍ಜಿಬಿಟಿಕ್ಯುಐ ನೇತೃತ್ವದಲ್ಲಿ ಜಮಾಯಿಸಿದ ಮಹಿಳೆಯರು, ಹೋರಾಟಗಾರರು, ಪುರಭವನ ಮುಂಭಾಗದ ವರೆಗೂ ಕಾಲ್ನಡಿಗೆ ಮೆರವಣಿಗೆ ಸಾಗಿದರು.
ಶತಮಾನಗಳ ಹೋರಾಟದಿಂದ ಪಡೆದಿರುವ ಮಹಿಳೆಯರ ಹಕ್ಕುಗಳನ್ನು ಪುನಃ ಕಿತ್ತುಕೊಳ್ಳುತ್ತಿರುವುದು ನಮ್ಮನ್ನು ಎಚ್ಚರಿಸಬೇಕಾಗಿದೆ. ಸಾರ್ವಜನಿಕ ಶಿಕ್ಷಣದ ಆದ್ಯ ಪ್ರವರ್ತಕರಾದ ಸಾವಿತ್ರಿ ಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರ ಜೀವನಗಳಿಂದ ಮತ್ತು ಎಲ್ಲ್ಲ ಬಾಲಕಿಯರ ಶಿಕ್ಷಣಕ್ಕೋಸ್ಕರ 19ನೆ ಶತಮಾನದಲ್ಲಿ ನಡೆಸಿದ ಅವರ ಚಳುವಳಿಯಿಂದ ಪ್ರಭಾವಿತಗೊಂಡು ಈ ನಡಿಗೆಯನ್ನು ಆಯೋಜಿಸಲಾಗಿತ್ತು ಎಂದು ಹೋರಾಟಗಾರರು ತಿಳಿಸಿದರು.
ಹಿಜಾಬ್(ಸ್ಕಾರ್ಫ್) ವಿಚಾರವನ್ನು ಇಟ್ಟುಕೊಂಡು ಮಹಿಳೆಯರ ಶಿಕ್ಷಣ ಹಕ್ಕು ಕಸಿಯುವ ಹುನ್ನಾರ ನಡೆಯುತ್ತಿದೆ.ಇದರ ವಿರುದ್ಧ ನಾವು ಎಚ್ಚರಗೊಳ್ಳಬೇಕಾಗಿದೆ. ದೇಶದಲ್ಲಿ ಮೂಲಭೂತ ಹಕ್ಕುಗಳ ಕಳವಳಕಾರಿ ಪರಿಸ್ಥಿತಿ ತಲುಪಿದ್ದು, ನಾವು ಪ್ರತಿಯೊಬ್ಬರು ಎಚ್ಚರಗೊಂಡು ಹೋರಾಟ ನಡೆಸುವ ಅಗತ್ಯತೆ ಇದೆ ಎಂದು ಮಹಿಳೆಯರು ಧ್ವನಿಗೂಡಿಸಿದರು.
ತಮ್ಮ ಮೂಲಭೂತವಾದ ಶೈಕ್ಷಣಿಕ ಹಕ್ಕು ಮತ್ತು ಉಡುಪು ಆಯ್ಕೆ ಮಾಡುವ ಹಕ್ಕುಗಳೆರಡರ ಮಧ್ಯೆ ಒಂದನ್ನೇ ಆರಿಸಬೇಕೆಂದು ಮಹಿಳೆಯರನ್ನು ಒತ್ತಾಯಿಸಬಾರದು. ಎಲ್ಲ್ಲ ಮಹಿಳೆಯರನ್ನು ಗೌರವಿಸಬೇಕು. ಸರಕಾರ, ಸಂಸದ, ಶಾಸಕರು ಮತ್ತಿತರ ಜನ ಪ್ರತಿನಿಧಿಗಳು ಅವಮಾನ ಮಾಡಬಾರದು ಎಂದು ಮಹಿಳೆಯರು ಒತ್ತಾಯ ಮಾಡಿದರು.
ತರಗತಿಯ ಪ್ರವೇಶಕ್ಕೆ ನಿರಾಕರಣೆಗೆ ಒಳಪಟ್ಟಿರುವ ಎಲ್ಲಾ ಬಾಲಕಿಯರಿಗೆ ಶಾಲಾ ಹಾಜರಾತಿಯನ್ನು ಕೊಡಿಸಬೇಕು.ಕಲಿಕಾ ಪಾಠಗಳಿಂದ ವಂಚಿತರಾಗಿರುವವರಿಗೆಲ್ಲಾ ತಕ್ಷಣ ಪರಿಹಾರಿಕ ಕಲಿಕಾಪಾಠಗಳನ್ನು ಆಯೋಜಿಸಿ ಕಲಿಕೆಯಲ್ಲಿನ ನಷ್ಟವನ್ನು ನಿವಾರಿಸಬೇಕು. ಲೈಂಗಿಕ, ಧಾರ್ಮಿಕ, ಜಾತೀಯ ತಾರತಮ್ಯಗಳನ್ನೆಲ್ಲಾ ನಿಲ್ಲಿಸಿ ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ಹಾಗೂ ಈ ನಾಡಿನ ಬಹುತ್ವಿಕ ವೈವಿಧ್ಯಮಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಆಗ್ರಹಿಸಿದರು.
ಕಾಲ್ನಡಿಗೆ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ.ಕೆ.ಶರೀಫಾ ಮತ್ತು ರಫೀಯಾ ಝೈನಬ್ ಅವರು ಕವಿತೆಗಳ ಕಾವ್ಯವಾಚಿಸಿದರು. ಮಮತಾ ಕಲಾವಿದೆ ಮಧುರಾ ಸೇರಿದಂತೆ ಪ್ರಮುಖರಿದ್ದರು.






.jpg)
.jpg)
.jpg)
.jpg)
.jpeg)

