ಅದಾನಿ ಫೌಂಡೇಷನ್‌ನಿಂದ ಯುಪಿಸಿಎಲ್ ಪರಿಸರದ 905 ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ

ಪಡುಬಿದ್ರಿ, ಮಾ.6: ಅದಾನಿ ಒಡೆತನದ ಯುಪಿಸಿಎಲ್ ಸಂಸ್ಥೆ ಸಿಎಸ್‌ಆರ್ ಯೋಜನೆಯ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಶಿಕ್ಷಣ ಕ್ಷೇತ್ರಕ್ಕೆ ಅತಿ ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಶಾಸಕ ಲಾಲಾಜಿ ಮೆಂಡನ್ ಶ್ಲಾಘಿಸಿದ್ದಾರೆ.
ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಒಡೆತನದ ಯುಪಿಸಿಎಲ್ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯನ್ನು ನಿರ್ವಹಿಸುತ್ತಿರುವ ಅದಾನಿ ಫೌಂಡೇಷನ್ ವತಿಯಿಂದ ರವಿವಾರ ಪಡುಬಿದ್ರಿಯ ಬಂಟರ ಭವನದಲ್ಲಿ ಹಮ್ಮಿಕೊಂಡ ಯುಪಿಸಿಎಲ್ ಸ್ಥಾವರದ ಸುತ್ತಮುತ್ತಲಿನ 12 ಗ್ರಾಪಂ ವ್ಯಾಪ್ತಿಯ ಸುಮಾರು 905 ಪ್ರತಿಭಾವನಂತ ವಿದ್ಯಾರ್ಥಿಗಳಿಗೆ ಒಟ್ಟು 20 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡುತಿದ್ದರು.
ಕಾಪು ಕ್ಷೇತ್ರದಲ್ಲಿ ಇರುವ ಬೃಹತ್ ಉದ್ದಿಮೆಗಳ ಪೈಕಿ ಯುಪಿಸಿಎಲ್ ಸಂಸ್ಥೆ ಮಾತ್ರ ಸಿಎಸ್‌ಆರ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾಗೊಳಿಸಿದ್ದು, ಕಾಪುವಿನಲ್ಲಿ ಕಾರ್ಯಾಚರಿಸುತ್ತಿರುವ ಐಎಸ್‌ಪಿಆರ್‌ಎಲ್ ಹಾಗೂ ಪಡುಬಿದ್ರಿಯಲ್ಲಿ ಕಾರ್ಯಾಚರಿಸುತ್ತಿರುವ ಸುಜ್ಲಾನ್ ಕಂಪೆನಿ ಸಿಎಸ್‌ಆರ್ ಅನುದಾನವನ್ನು ಸಮಪರ್ಕವಾಗಿ ಬಳಕೆ ಮಾಡುತಿಲ್ಲ ಎಂದು ಲಾಲಾಜಿ ಮೆಂಡನ್ ಅಸಮಾಧಾನ ವ್ಯಕ್ತಪಡಿಸಿದರು. ಪಡುಬಿದ್ರಿ ಗ್ರಾಪಂಗೆ ಹೆಚ್ಚುವರಿ ಜಾಗ ಬೇಕಾಗಿದ್ದು, ಈ ನಿಟ್ಟಿನಲ್ಲಿ ಸುಜ್ಲಾನ್‌ನ 15ಎಕ್ರೆ ಜಾಗವನ್ನು ನೀಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಲಾಲಾಜಿ ಮೆಂಡನ್ ಹೇಳಿದರು.
ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ, ಯುಪಿಸಿಎಲ್ ಅದಾನಿ ಫೌಂಡೇಶನ್‌ನ ಸಹಯೋಗದೊಂದಿಗೆ ಸಿಎಸ್‌ಅರ್ ಯೋಜನೆಯಡಿಯಲ್ಲಿ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಶಿಕ್ಷಣ, ಆರೋಗ್ಯ, ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕ್ಷೇತ್ರದಲ್ಲಿ ಸಮಾಜಮುಖಿ ಕೆಲಸಗಳನ್ನು ಪ್ರತಿ ವರ್ಷವೂ ನಿರ್ವಹಿಸಿಕೊಂಡು ಬರುತ್ತಿದೆ ಎಂದರು.
ಅದಾನಿ ಸಮೂಹವು ಯುಪಿಸಿಎಲ್ ಯೋಜನೆಯ ಜೊತೆಗೆ ಕರಾವಳಿ ಪ್ರದೇಶದಲ್ಲಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಉಡುಪಿ ಜಿಲ್ಲೆಯ ನಗರ ಅನಿಲ ವಿತರಣೆ ಯೋಜನೆಯನ್ನು ನಿರ್ವಹಿಸುತ್ತಿದ್ದು ಇದರಿಂದ ಅದಾನಿ ಸಂಸ್ಥೆಯ ಸಿಎಸ್‌ಆರ್ ಅನುದಾನದಡಿ ಗ್ರಾಮಗಳಲ್ಲಿ ಮುಂಬರುವ ದಿನಗಳಲ್ಲಿ ಹೆಚ್ಚಿನ ಜನಪರ ಹಾಗೂ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅನುಕೂಲಾಗುತ್ತದೆ ಎಂದು ಆಳ್ವ ನುಡಿದರು.
ಅತಿಥಿಯಾಗಿ ಭಾಗವಹಿಸಿದ್ದ ಎಲ್ಲೂರು ಗ್ರಾಪಂ ಅಧ್ಯಕ್ಷ ಜಯಂತ್‌ಕುಮಾರ್ ಮಾತನಾಡಿ, ಅದಾನಿ ಸಮೂಹವು ತನ್ನ ಸಿಎಸ್‌ಆರ್ ಯೋಜನೆಯಡಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಿ ಅದರ ಪ್ರಯೋಜನವನ್ನು ಗ್ರಾಮಸ್ಥರು ಪಡೆಯುತ್ತಿರುವುದು ಸಂತಸದ ಸಂಗತಿ. ಎಲ್ಲೂರು ಪಂಚಾಯತ್ ವ್ಯಾಪ್ತಿಯಲ್ಲಿ ಯುಪಿಸಿಎಲ್ ಸ್ಥಾಪಿತವಾಗಿದ್ದು, ಸಿಎಸ್‌ಆರ್ ಯೋಜನೆಯಡಿ ಇನ್ನೂ ಹೆಚ್ಚು ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಬೇಕು. ಎಲ್ಲೂರು, ತೆಂಕ, ಮುದರಂಗಡಿ ಗ್ರಾಪಂ ವ್ಯಾಪ್ತಿಯಲ್ಲಿ ಶೇ.75ರಷ್ಟು ಅಂಕ ಪಡೆದವರಿಗೆ ವಿದಾರ್ಥಿ ವೇತನಕ್ಕೆ ಪರಿಗಣನೆ ಮಾಡಬೇಕು ಎಂದು ಒತ್ತಾಯಿಸಿದರು.
ಪರಿಸರದ ವಿವಿಧ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರಾದ ಜಯಂತ್ ಕುಮಾರ್ ಎಲ್ಲೂರು, ರವಿ ಶೆಟ್ಟಿ ಪಡುಬಿದ್ರಿ, ಕಸ್ತೂರಿ ಪ್ರವೀಣ್ ತೆಂಕ ಎರ್ಮಾಳು, ಜ್ಯೋತಿ ಬಡಾ ಉಚ್ಚಿಲ, ಗಾಯತ್ರಿ ಪ್ರಭು ಫಲಿಮಾರು, ಕುಶಾ ಮೂಲ್ಯ ಇನ್ನಾ, ಮಮತಾ ದಿವಾಕರ್ ಪೂಂಜಾ ಬಳಕುಂಜೆ, ಶರ್ಮೀಳಾ ಮಜೂರು, ಲತಾ ಎಸ್. ಆಚಾರ್ಯ ಕುತ್ಯಾರು, ಬೆಳಪು ಗ್ರಾಪಂ ಉಪಾಧ್ಯಕ ಶರತ್, ಅದಾನಿ ಫೌಂಡೇಶನ್‌ನ ಸಿಬ್ಬಂದಿಗಳಾದ ಅನುದೀಪ್ ಪೂಜಾರಿ, ಶುಭಮಂಗಳ ಎರ್ಮಾಳ್, ರಿತೇಶ್ ಮೂಲ್ಯ, ಧನರಾಜ್, ಯಶವಂತ್ ಆಂಚನ್ ಮತ್ತಿತರರು ಉಪಸ್ಥಿತರಿದ್ದರು.
ಯುಪಿಸಿಎಲ್ ಕಂಪನಿಯ ಡಿಜಿಎಂ ರವಿ ಆರ್. ಜೇರೆ ಸ್ವಾಗತಿಸಿದರು. ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.