ನಮ್ಮ ದೇಶದ ಸ್ವಾಯತ್ತ ಸಂಸ್ಥೆಗಳು ಸರ್ಕಾರದ ಪೌರೋಹಿತ್ಯ ಸಂಸ್ಥೆಗಳಾಗುತ್ತಿವೆ: ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ

ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ
ಮೈಸೂರು,5: ನಮ್ಮ ದೇಶದ ನ್ಯಾಯಾಲಯ, ಸಿಬಿಐ ಮತ್ತು ಚುನಾವಣಾ ಆಯೋಗದಂತ ಸ್ವಾಯತ್ತ ಸಂಸ್ಥೆಗಳು ಸರ್ಕಾರದ ಪೌರೋಹಿತ್ಯ ಸಂಸ್ಥೆಗಳಾಗುತ್ತಿವೆ ಎಂದು ಪ್ರಗತಿಪರ ಚಿಂತಕ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ವಿಷಾಧ ವ್ಯಕ್ತಪಡಿಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮಾನಸ ಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ರವಿವಾರ ಆಯೋಜಿಸಿದ್ದ ಪ್ರಸ್ತುತ ಸಾಂಸ್ಕೃತಿಕ ಬಿಕ್ಕಟ್ಟುಗಳು ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಸ್ವಾಯತ್ತ ಸಂಸ್ಥೆಗಳು ಮತ್ತು ಬಲಪಂಥೀಯ ಧೋರಣೆಗಳು ಎಂಬ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನರಿಂದ ಜನರಿಗಾಗಿ ಇದ್ದಂತಹ ಸ್ವಾಯತ್ತ ಸಂಸ್ಥೆಗಳು ಸರ್ಕಾರದ ಹಿಡಿತದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿವೆ. ಸ್ವಾಯತ್ತ ಸಂಸ್ಥೆಗಳು ಎಂದರೆ ಜನರಿಂದ ಜನರಿಗಾಗಿ ಎಂಬುದನ್ನು ಮರೆತು ಕಾರ್ಪೋರೇಟ್ಗಳ ಕಡೆಗೆ ನಿರ್ಮಾಣ ಮಾಡಲಾಗುತ್ತಿದೆ. ಇವುಗಳೆಲ್ಲಾ ವಾಣಿಜ್ಯೀಕರಣಗೊಂಡು ಹಣ ಗಳಿಸುವ ಸಂಸ್ಥೆಗಳಾಗುತ್ತಿವೆ ಎಂದು ಕಿಡಿಕಾರಿದರು.
ಸ್ವಾಯತ್ತ ಸಂಸ್ಥೆಗಳು ಎಂದರೆ ಈ ಹಿಂದೆ ದೇವಸ್ಥಾನದಂತಿತ್ತು. ಅಲ್ಲಿ ಕಲಾವಿದರು. ಸಾಹಿತಿಗಳು ಕೆಲಸ ಮಾಡುತ್ತಿದ್ದರು. ಯಾವುದೇ ಪ್ರಾಧಿಕಾರ, ನಿಗಮಮಂಡಳಿಗಳಿಗೆ ಆ ಸಂಸ್ಥೆಗಳ ಬಗ್ಗೆ ಪರಿಣಿತಿ ಹೊಂದಿರುವವರನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತಿತ್ತು. ಆದರೆ ಈಗ ಪಕ್ಷಳಗ ಮುಖಂಡರುಗಳನ್ನು ತುಂಬಿಕೊಂಡು ಕಸಾಯಿಖಾನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಚಾರಗೋಷ್ಠಿಯಲ್ಲಿ ಸಾಹಿತಿ ಡಾ.ವಸುಂಧರ ಭೂಪತಿ, ವಿಷಯ ಮಂಡನೆ ಮಾಡಿದರು.
ನಮ್ಮಲ್ಲಿರುವ ಉತ್ತಮರು ಏನು ಇಲ್ಲದೆ ಹಾಗೆ ಇದ್ದಾರೆ. ಅಸಮರ್ಥರು ಎಲ್ಲವನ್ನು ಪಡೆದು ನಮ್ಮನ್ನು ಆಳುತ್ತಿದ್ದಾರೆ.
-ಶಿವಸುಂದರ್, ಚಿಂತಕ








