ಉಕ್ರೇನ್ಗೆ ಯುದ್ಧವಿಮಾನ ಪೂರೈಸಲು ಪೋಲ್ಯಾಂಡ್ ಜತೆ ಅಮೆರಿಕ ಒಪ್ಪಂದ: ವರದಿ

photo courtesy:twitter
ವಾಷಿಂಗ್ಟನ್, ಮಾ.6: ರಶ್ಯಾದ ಆಕ್ರಮಣವನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಉಕ್ರೇನ್ಗೆ ಪೋಲಂಡ್ ಮೂಲಕ ಯುದ್ಧವಿಮಾನಗಳನ್ನು ಪೂರೈಸುವ ಒಪ್ಪಂದಕ್ಕೆ ಅಂತಿಮ ರೂಪ ನೀಡಲಾಗುತ್ತಿದೆ ಎಂದು ಅಮೆರಿಕ ಹೇಳಿದೆ.
ಸಂಭಾವ್ಯ ಒಪ್ಪಂದದ ಪ್ರಕಾರ, ತನ್ನಲ್ಲಿರುವ ಸೋವಿಯತ್ ಒಕ್ಕೂಟದ ಯುಗದ ಯುದ್ಧವಿಮಾನಗಳನ್ನು ಪೋಲಂಡ್ ಉಕ್ರೇನ್ಗೆ ಪೂರೈಸಲಿದ್ದು ಅದರ ಬದಲು ಅಮೆರಿಕ ಪೋಲಂಡ್ಗೆ ಎಫ್-16 ಯುದ್ಧವಿಮಾನ ಒದಗಿಸುತ್ತದೆ. ಈ ಒಪ್ಪಂದದ ಬಗ್ಗೆ ಪೋಲಂಡ್ನೊಂದಿಗೆ ಅಂತಿಮ ಹಂತದ ಮಾತುಕತೆ ನಡೆಯುತ್ತಿದ್ದು, ನಮ್ಮ ನೇಟೊ ಮಿತ್ರರಾಷ್ಟ್ರಗಳೊಂದಿಗೆ ಚರ್ಚಿಸಿ ಒಪ್ಪಂದವನ್ನು ಅಂತಿಮಗೊಳಿಸಲಾಗುವುದು ಎಂದು ಶ್ವೇತಭವನದ ಅಧಿಕಾರಿಯನ್ನು ಉಲ್ಲೇಖಿಸಿ ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಉಕ್ರೇನ್ ಮೇಲೆ ರಶ್ಯಾ ಆಕ್ರಮಣ ನಡೆಸಿದಂದಿನಿಂದ ಪಾಶ್ಚಿಮಾತ್ಯ ದೇಶಗಳಿಂದ ಉಕ್ರೇನ್ಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡು ಮತ್ತು ಆರ್ಥಿಕ ನೆರವು ಪೂರೈಕೆಯಾಗಿದೆ. ಸೋವಿಯತ್ ಯುಗದ ಅಥವಾ ರಶ್ಯದಲ್ಲಿ ನಿರ್ಮಾಣಗೊಂಡಿರುವ ಯುದ್ಧವಿಮಾನಗಳನ್ನು ನಿರ್ವಹಿಸಲು ತನ್ನ ಪೈಲಟ್ಗಳು ತರಬೇತಿ ಪಡೆದಿರುವುದರಿಂದ ಇಂತಹ ವಿಮಾನಗಳನ್ನು ಪೂರೈಸುವಂತೆ ಉಕ್ರೇನ್ ಅಧ್ಯಕ್ಷರು ಆಗ್ರಹಿಸಿದ್ದರು.
ಉಕ್ರೇನ್ ಜನತೆಯ ಸ್ವಾತಂತ್ರ್ಯಕ್ಕೆ ತುರ್ತು ನೆರವಿನ ಅಗತ್ಯವಿದೆ. ಉಕ್ರೇನ್ಗೆ ನೆರವಿನ ಪೂರೈಕೆಗೆ ಅಡ್ಡಿಯಾಗುವ ಎಲ್ಲಾ ತೊಡಕುಗಳನ್ನೂ ನಿವಾರಿಸಬೇಕಿದೆ. ಉಕ್ರೇನ್ಗೆ ಸೋವಿಯತ್ ಯುಗದ ಯುದ್ಧವಿಮಾನ ಒದಗಿಸುವ ನಮ್ಮ ಪೂರ್ವ ಯುರೋಪ್ನ ಮಿತ್ರದೇಶ(ಪೋಲಂಡ್)ಕ್ಕೆ ಬದಲಿ ನೆರವು ಒದಗಿಸುವ ವ್ಯವಸ್ಥೆಗೆ ನಮ್ಮ ಬೆಂಬಲವಿದೆ ಎಂದು ಅಮೆರಿಕದ ಸಂಸತ್ ಸದಸ್ಯರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಉಕ್ರೇನ್ ಗೆ ಹೆಚ್ಚುವರಿಯಾಗಿ 10 ಬಿಲಿಯನ್ ಡಾಲರ್ ನೆರವಿನ ಪ್ಯಾಕೇಜ್ಗೆ ಅಮೆರಿಕದ ಸಂಸದರು ಬೆಂಬಲದ ಭರವಸೆ ನೀಡಿದ್ದಾರೆ. ಆದರೆ ರಶ್ಯಾದಿಂದ ತೈಲ ಆಮದನ್ನು ನಿಷೇಧಿಸಿದರೆ ತೈಲ ಬೆಲೆ ಗಗನಕ್ಕೇರಲಿದೆ ಎಂಬ ಕಾರಣಕ್ಕೆ ಇದನ್ನು ವಿರೋಧಿಸಿದ್ದಾರೆ.





