ಉಕ್ರೇನ್ ನಿರಾಶ್ರಿತರ ಸಂಖ್ಯೆ 15 ಲಕ್ಷ ತಲುಪುವ ಸಾಧ್ಯತೆ: ವಿಶ್ವಸಂಸ್ಥೆ

photp courtesy:twitter
ಜಿನೆವಾ, ಮಾ.6: ರಶ್ಯಾದ ಆಕ್ರಮಣದ ಬಳಿಕ ಉಕ್ರೇನ್ನಿಂದ ಪಲಾಯನ ಮಾಡಿರುವವರ ಸಂಖ್ಯೆ 13 ಲಕ್ಷದ ಗಡಿ ದಾಟಿದ್ದು ಈ ವಾರಾಂತ್ಯಕ್ಕೆ 15 ಲಕ್ಷಕ್ಕೆ ತಲುಪುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಮಾ.5ರ ಅಂದಾಜಿನ ಪ್ರಕಾರ ಉಕ್ರೇನ್ ನಿರಾಶ್ರಿತರ ಸಂಖ್ಯೆ 13 ಲಕ್ಷದ ಗಡಿ ದಾಟಿದೆ. ಈ ವಾರಾಂತ್ಯಕ್ಕೆ 15 ಲಕ್ಷದ ಗಡಿ ದಾಟುವ ನಿರೀಕ್ಷೆಯಿದೆ. 2ನೇ ವಿಶ್ವಯುದ್ಧದ ಬಳಿಕ ವರದಿಯಾಗಿರುವ ಅತ್ಯಂತ ಕ್ಷಿಪ್ರವಾಗಿ ಏರಿಕೆಯಾಗುತ್ತಿರುವ ನಿರಾಶ್ರಿತರ ಬಿಕ್ಕಟ್ಟು ಇದಾಗಿದೆ ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಸಮಿತಿ ಯುಎನ್ಎಚ್ಸಿಆರ್ನ ಮುಖ್ಯಸ್ಥ ಫಿಲಿಪೊ ಗ್ರಾಂಟಿ ಹೇಳಿದ್ದಾರೆ.
ಉಕ್ರೇನ್ನಿಂದ ಪಲಾಯನ ಮಾಡಿದವರಲ್ಲಿ 7,56,303 ಅಥವಾ 55.3% ಜನರು ಪೋಲಂಡ್ಗೆ ತೆರಳಿದ್ದಾರೆ. ಸುಮಾರು 1,57,004 ಜನ ಹಂಗರಿಗೆ, 1,03,253 ಜನ ಮೊಲ್ದೊವಾಕ್ಕೆ, 1,01,529 ಮಂದಿ ಸ್ಲೊವಾಕಿಯಾಕ್ಕೆ ಪಲಾಯನ ಮಾಡಿರುವುದಾಗಿ ಯುಎನ್ಎಚ್ಸಿಆರ್ ವರದಿ ಹೇಳಿದೆ.
ಈ ಮಧ್ಯೆ, ಉಕ್ರೇನ್ ನಿರಾಶ್ರಿತರ ಸಂಖ್ಯೆ 14.5 ಲಕ್ಷ ಎಂದು ವಲಸೆಗೆ ಸಂಬಂಧಿಸಿದ ಅಂತರಾಷ್ಟ್ರೀಯ ಸಂಸ್ಥೆ ಅಂದಾಜಿಸಿದೆ. 138 ದೇಶಗಳ ಪ್ರಜೆಗಳು ಉಕ್ರೇನ್ ಗಡಿ ದಾಟಿ ನೆರೆಯ ದೇಶವನ್ನು ಪ್ರವೇಶಿಸಿದ್ದಾರೆ ಎಂದು ಸಂಸ್ಥೆ ಹೇಳಿದೆ. ಉಕ್ರೇನ್ ಮೇಲೆ ಫೆಬ್ರವರಿ 24ರಿಂದ ಆರಂಭವಾಗಿರುವ ರಶ್ಯಾದ ಆಕ್ರಮಣದಿಂದ ಇದುವರೆಗೆ ಸುಮಾರು 50,000 ಸಾವುನೋವಿನ ಪ್ರಕರಣ ವರದಿಯಾಗಿದೆ.
ಉಕ್ರೇನ್ ಮೇಲೆ ರಶ್ಯಾ ಪಡೆಯಿಂದ ತೀವ್ರ ಬಾಂಬ್ ಮತ್ತು ಕ್ಷಿಪಣಿ ದಾಳಿ ಮುಂದುವರಿದಿದೆ. ಉಕ್ರೇನ್ ವಿವಿಧೆಡೆ ಯುದ್ಧಕ್ಷೇತ್ರದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರ ಸುರಕ್ಷಿತ ಸ್ಥಳಾಂತರ ಕಾರ್ಯಕ್ಕೆ ನೆರವಾಗುವಂತೆ ಭಾರತ ಸರಕಾರ ರಶ್ಯಾ ಮತ್ತು ಉಕ್ರೇನ್ ಸರಕಾರಕ್ಕೆ ಕೋರಿಕೆ ಸಲ್ಲಿಸಿದೆ. ತಾವು ಉಕ್ರೇನ್ ಗಡಿ ದಾಟಿದ ಬಳಿಕವಷ್ಟೇ ನೆರೆಯ ದೇಶಗಳಲ್ಲಿರುವ ಭಾರತದ ರಾಯಭಾರಿ ಕಚೇರಿ ನಮ್ಮ ನೆರವಿಗೆ ಬರುತ್ತಿದೆ. ಉಕ್ರೇನ್ ಗಡಿ ದಾಟಲು ಹಲವು ಕಿ.ಮೀ ದೂರ ನಡೆದುಕೊಂಡೇ ಬರಬೇಕಾದ ಪರಿಸ್ಥಿತಿಯಿದೆ ಎಂದು ಭಾರತೀಯ ವಿದ್ಯಾರ್ಥಿಗಳು ದೂರಿದ್ದಾರೆ.







