ಮುಂಬೈ: ಪತ್ರಕರ್ತೆ ರಾಣಾ ಅಯ್ಯೂಬ್ ಕುರಿತು ನಕಲಿ ಸುದ್ದಿ ಹರಡಿದ ಆರೋಪದಲ್ಲಿ ಇಬ್ಬರ ಬಂಧನ

ಮುಂಬೈ, ಮಾ. 6: ಪತ್ರಕರ್ತೆ ರಾಣಾ ಅಯ್ಯೂಬ್ ಅವರ ಕುರಿತು ಯುಟ್ಯೂಬ್ನಲ್ಲಿ ನಕಲಿ ಸುದ್ದಿ ಹರಡಿದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಮುಂಬೈ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಜನವರಿಯಲ್ಲಿ ಆನ್ಲೈನ್ ನ್ಯೂಸ್ ಪೋರ್ಟಲ್ನ ಯುಟ್ಯೂಬ್ ಚಾನೆಲ್ ‘ಸ್ಕೂಪ್ ಬೀಟ್ಸ್’ನಲ್ಲಿ ಅಯ್ಯೂಬ್ ಅವರ ಕುರಿತು ವೀಡಿಯೊ ಪೋಸ್ಟ್ ಮಾಡಿದ ಆರೋಪದಲ್ಲಿ ಬಂಧಿತರಾದವರನ್ನು ಉತ್ತರಪ್ರದೇಶ ಮೂಲದ ವಿದ್ಯಾಂಶಿ ಕೃಷ್ಣ ಕುಮಾರ್ ಹಾಗೂ ಆಯುಷ್ ಚಂದ್ರಮೋಹನ್ ಶ್ರೀವಾತ್ಸವ್ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ತಿಂಗಳು ‘ಸ್ಕೂಪ್ ಬೀಟ್’ ರಾಣಾ ಅವರಲ್ಲಿ ಕ್ಷಮೆ ಕೋರಿತ್ತು. ತನ್ನ ಇಬ್ಬರು ಉದ್ಯೋಗಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿತ್ತು. ಅಲ್ಲದೆ ಪೋರ್ಟಲ್ ಯುಟ್ಯೂಬ್ ವೀಡಿಯೊವನ್ನು ತೆಗೆದು ಹಾಕಿತ್ತು.
ಅಯ್ಯೂಬ್ ಅವರು ಶನಿವಾರ ಟ್ವೀಟರ್ ಗೆ ಪತ್ರ ಬರೆದು, ತ್ರಿವೇದಿ ಹಾಗೂ ಶ್ರೀವಾತ್ಸವ ತನಗೆ ಪಾಕಿಸ್ತಾನ ನೆರವು ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಸೌದಿ ಅರೇಬಿಯಾ ತನಗೆ ನಿಷೇಧ ಹೇರಿದೆ ಎಂದು ಪ್ರತಿಪಾದಿಸಿದ್ದಾರೆ ಎಂದಿದ್ದಾರೆ. ‘‘ಇವರಿಬ್ಬರ ಬಂಧನ ನ್ಯಾಯದ ದಿಶೆಯಲ್ಲಿ ಅತಿ ದೊಡ್ಡ ಹೆಜ್ಜೆ’’ ಎಂದು ರಾಣಾ ಅಯ್ಯೂಬ್ ಹೇಳಿದ್ದಾರೆ.
ಶ್ರೀವಾಸ್ತವ್ ಅವರು ಅಯ್ಯೂಬ್ ಅವರ ಹೆಸರಿಲ್ಲಿದ್ದ ಟ್ವೀಟ್ ಅನ್ನು ತಿರುಚಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ‘ನ್ಯಾಷನಲ್ ಹೆರಾಲ್ಡ್’ ಉಲ್ಲೇಖಿಸಿದೆ.
‘‘ವಿಚಾರಣೆಗೆ ಹಾಜರಾಗುವಂತೆ ನಾವು ಇಬ್ಬರೂ ಆರೋಪಿಗಳಿಗೆ ನೋಟಿಸು ಜಾರಿಗೊಳಿಸಿದ್ದೆವು. ಅವರು ಶನಿವಾರ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಆರೋಪ ಮೇಲ್ನೋಟಕ್ಕೆ ಸಾಬೀತಾದ ಬಳಿಕ ಅವರನ್ನು ಬಂಧಿಸಿದೆವು’’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.







