ರಶ್ಯಾದ ವಿರುದ್ಧ ಪಾಶ್ಚಿಮಾತ್ಯ ದೇಶಗಳು ವಿಧಿಸಿರುವ ನಿರ್ಬಂಧ ಯುದ್ಧ ಘೋಷಣೆಗೆ ಸಮ: ಪುಟಿನ್ ಎಚ್ಚರಿಕೆ
"ಉಕ್ರೇನ್ನ ಭವಿಷ್ಯ ಗಂಡಾಂತರದಲ್ಲಿದೆ"

Vladimir Putin | photo courtesy:twitter
ಮಾಸ್ಕೊ, ಮಾ.6: ಉಕ್ರೇನ್ನ ಬಂದರು ನಗರ ಮರಿಯುಪೊಲ್ನಲ್ಲಿ ಜಾರಿಗೊಂಡಿದ್ದ ಕದನ ವಿರಾಮ ಕುಸಿದುಬಿದ್ದಿರುವಂತೆಯೇ, ರಶ್ಯಾದ ವಿರುದ್ಧ ಪಾಶ್ಚಿಮಾತ್ಯ ದೇಶಗಳು ವಿಧಿಸಿರುವ ನಿರ್ಬಂಧ ಯುದ್ಧ ಘೋಷಣೆಗೆ ಸಮವಾಗಿದೆ ಎಂದು ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರತಿಪಾದಿಸಿದ್ದಾರೆ. ಜತೆಗೆ, ಇದೀಗ ಉಕ್ರೇನ್ನ ದೇಶತ್ವವು ಗಂಡಾಂತರಕ್ಕೆ ಸಿಲುಕಿದೆ ಎಂದು ಎಚ್ಚರಿಸಿದ್ದಾರೆ.
ಕದನ ವಿರಾಮ ವಿಫಲವಾಗಲು ಉಕ್ರೇನ್ ಸೇನೆ ಕಾರಣ ಎಂದು ರಶ್ಯ ಆರೋಪಿಸಿದೆ. ರಶ್ಯ ಪಡೆಗಳು ಮರಿಯುಪೊಲ್ ಹಾಗೂ ಸುತ್ತಮುತ್ತಲಿನ ನಗರಗಳಿಗೆ ಮುತ್ತಿಗೆ ಹಾಕಿದ್ದು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿ ತೀವ್ರ ಬಾಂಬ್ ದಾಳಿ ನಡೆಸುತ್ತಿವೆ. ರಾಜಧಾನಿ ಕೀವ್ನ ಉತ್ತರದಲ್ಲಿರುವ ಚೆರ್ನಿಹಿವ್ ನಗರದ ಮೇಲೆ ಶಕ್ತಿಶಾಲಿ ಬಾಂಬ್ ಎಸೆದಿದೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ. ಆದರೆ ಯುದ್ಧ ಮುಂದುವರಿಯಲು ಉಕ್ರೇನ್ ಆಡಳಿತ ಕಾರಣ ಎಂದು ರಶ್ಯ ಅಧ್ಯಕ್ಷ ಪುಟಿನ್ ಆರೋಪಿಸಿದ್ದಾರೆ.
ಉಕ್ರೇನ್ ಮುಖಂಡರು ಇದೇ ರೀತಿ ಮಾಡಿದರೆ, ಉಕ್ರೇನ್ನ ದೇಶತ್ವದ ಭವಿಷ್ಯದ ಬಗ್ಗೆ ಪ್ರಶ್ನೆ ಮೂಡಲಿದೆ. ಒಂದು ವೇಳೆ ಇದು ಸಂಭವಿಸಿದರೆ ಅದಕ್ಕೆ ತಾವೇ ಕಾರಣ ಎಂದವರ ಆತ್ಮಸಾಕ್ಷಿ ಹೇಳಲಿದೆ ಎಂದು ಪುಟಿನ್ ಎಚ್ಚರಿಸಿದ್ದಾರೆ. ಅಲ್ಲದೆ ರಶ್ಯದ ಮೇಲೆ ಪಾಶ್ಚಿಮಾತ್ಯ ದೇಶಗಳು ವಿಧಿಸಿರುವ ನಿರ್ಬಂಧ ಯುದ್ಧ ಘೋಷಣೆಗೆ ಸಮಾನವಾಗಿದೆ. ಆದರೆ ದೇವರ ದಯೆ, ನಾವಿನ್ನೂ ಅಲ್ಲಿಯವರೆಗೆ ತಲುಪಿಲ್ಲ ಎಂದವರು ಹೇಳಿದ್ದಾರೆ.
ಉಕ್ರೇನ್ ಮೇಲಿನ ರಶ್ಯ ಆಕ್ರಮಣಕ್ಕೆ ಸಂಬಂಧಿಸಿ ರವಿವಾರದ ಕೆಲವು ಮಹತ್ವದ ಬೆಳವಣಿಗೆಗಳು:
ಬಾಂಬ್, ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟ ಮಕ್ಕಳ ಮೃತದೇಹವನ್ನು ಕಂಡು ತಾಯಂದಿರ ಆಕ್ರಂದನ, ಗಾಯಾಳು ಸೈನಿಕರನ್ನು ಆಸ್ಪತ್ರೆಗೆ ಸಾಗಿಸುವ ತರಾತುರಿ, ವಿದ್ಯುತ್ ಪೂರೈಕೆ ಮೊಟಕುಗೊಂಡಿರುವುದರಿಂದ ಮೊಬೈಲ್ ಫೋನ್ನ ಟಾರ್ಚ್ ಬೆಳಕಿನಲ್ಲೇ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಆರೈಕೆ ಮಾಡುತ್ತಿರುವ ವೈದ್ಯರು- ಇದು ಚೆರ್ನಿಹಿವ್ ನಗರದಲ್ಲಿರುವ ಪರಿಸ್ಥಿತಿ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಶ್ಯದಲ್ಲಿನ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿರುವುದಾಗಿ ಮಾಸ್ಟರ್ ಕಾರ್ಡ್ ಮತ್ತು ವಿಸಾ ಘೋಷಣೆ.
ಮರಿಯುಪೊಲ್ನಿಂದ ಜನರು ಸುರಕ್ಷಿತವಾಗಿ ಹೊರತೆರಳುವ ಯತ್ನಕ್ಕೆ ರಶ್ಯಾದ ಫಿರಂಗಿ ದಾಳಿ ತಡೆಯೊಡ್ಡಿದೆ. ಇದರಿಂದ ಕದನವಿರಾಮ ವಿಫಲವಾಗಿದೆ ಎಂದು ಉಕ್ರೇನ್ ಆರೋಪ. ಆದರೆ ಕದನವಿರಾಮ ವಿಫಲವಾಗಲು ಉಕ್ರೇನ್ ಕಾರಣ ಎಂದು ರಶ್ಯ ಪ್ರತಿಪಾದನೆ.
ಮರಿಯುಪೊಲ್ನಿಂದ ಹೊರತೆರಳಲು ಸಾವಿರಾರು ನಾಗರಿಕರು ಸಿದ್ಧವಾಗಿದ್ದಾರೆ. ಆದರೆ ರಶ್ಯದ ಸೇನೆ ತಡೆಯುತ್ತಿದೆ. ರಶ್ಯಾದ ವಾಯುಪಡೆ ಜನವಸತಿ ಪ್ರದೇಶಗಳ ಮೇಲೆ ಬಾಂಬ್ದಾಳಿ ನಡೆಯುತ್ತಿದ್ದು ಅತ್ಯಂದ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ಮರಿಯುಪೋಲ್ ಮೇಯರ್ ವ್ಯಾಡಿಮ್ ಬಾಯ್ಶೆಂಕೊ ಆರೋಪಿಸಿದ್ದಾರೆ.
ರಶ್ಯ-ಉಕ್ರೇನ್ ನಡುವೆ 3ನೇ ಸುತ್ತಿನ ಸಂಧಾನ ಸಭೆ ಸೋಮವಾರ(ಮಾರ್ಚ್ 7)ದಂದು ನಡೆಯಲಿದೆ ಎಂದು ಉಕ್ರೇನ್ ನಿಯೋಗದ ಸದಸ್ಯರ ಹೇಳಿಕೆ.
ಯುದ್ಧ ನಿಲ್ಲಿಸುವಂತೆ ಪುಟಿನ್ಗೆ ಮನವರಿಕೆ ಮಾಡಿ: ಭಾರತಕ್ಕೆ ಉಕ್ರೇನ್ ಆಗ್ರಹ
ಉಕ್ರೇನ್ ವಿರುದ್ಧದ ಯುದ್ಧ ಕೊನೆಗೊಳ್ಳುವುದು ಎಲ್ಲಾ ದೇಶಗಳ ಹಿತಾಸಕ್ತಿಗೆ ಪೂರಕವಾಗಿದೆ. ಆದ್ದರಿಂದ ರಶ್ಯಾದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಭಾರತ, ಚೀನಾ ಮತ್ತಿತರ ದೇಶಗಳು ಯುದ್ಧವು ಎಲ್ಲರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ರಶ್ಯಾ ಅಧ್ಯಕ್ಷ ಪುಟಿನ್ಗೆ ಮನವರಿಕೆ ಮಾಡಬೇಕೆಂದು ಉಕ್ರೇನ್ನ ವಿದೇಶ ಸಚಿವ ಡಿಮಿಟ್ರೊ ಕುಲೆಬಾ ಆಗ್ರಹಿಸಿದ್ದಾರೆ.
ಉಕ್ರೇನ್ನ ಕೃಷಿ ಉತ್ಪನ್ನಗಳಿಗೆ ಭಾರತ ಅತೀ ದೊಡ್ಡ ಮಾರುಕಟ್ಟೆಯಾಗಿದೆ. ಈ ಯುದ್ಧ ಮುಂದುವರಿದರೆ ಕೃಷಿ ಚಟುವಟಿಕೆ ಮೊಟಕುಗೊಳ್ಳಲಿದೆ. ಆದ್ದರಿಂದ ಜಾಗತಿಕ ಮತ್ತು ಭಾರತದ ಆಹಾರ ಭದ್ರತೆ ವಿಷಯಕ್ಕೆ ಸಂಬಂಧಿಸಿಯೂ ಈ ಯುದ್ಧ ಮುಗಿಸುವುದು ಎಲ್ಲರ ಹಿತಾಸಕ್ತಿಗೆ ಪೂರಕವಾಗಲಿದೆ ಎಂದವರು ಹೇಳಿದ್ದಾರೆ. ರಶ್ಯ ಕದನವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ ಅವರು, ಉಕ್ರೇನ್ನ ಯುದ್ಧವಲಯದಲ್ಲಿರುವ ವಿದೇಶಿಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಪ್ರಕ್ರಿಯೆಗೆ ರಶ್ಯ ಸೇನೆ ಅಡ್ಡಿಯಾಗಿದೆ ಎಂದರು.
30 ವರ್ಷದಿಂದ ಉಕ್ರೇನ್ ಆಫ್ರಿಕಾ, ಏಶ್ಯಾ ಸಹಿತ ವಿದೇಶಗಳ ಸಾವಿರಾರು ವಿದ್ಯಾರ್ಥಿಗಳ ಸ್ವಾಗತಾರ್ಹ ಮನೆಯಾಗಿತ್ತು. ವಿದೇಶದ ವಿದ್ಯಾರ್ಥಿಗಳ ಪ್ರಯಾಣಕ್ಕೆ ಉಕ್ರೇನ್ ರೈಲುಗಳ ವ್ಯವಸ್ಥೆ ಮಾಡಿದೆ, ಹಾಟ್ಲೈನ್ ಮೂಲಕ ತಾಯ್ನೆಡಿನ ಅಧಿಕಾರಿಗಳನ್ನು ಸಂಪರ್ಕಿಸುವ, ರಾಯಭಾರ ಕಚೇರಿಯೊಂದಿಗೆ ಸಂವಹನ ಸಾಧಿಸುವ ಕಾರ್ಯ ಮಾಡಿದೆ. ಉಕ್ರೇನ್ ಸರಕಾರ ತನ್ನಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನೂ ಮಾಡಿದೆ.
ಆದರೆ, ವಿದೇಶದ ವಿದ್ಯಾರ್ಥಿಗಳ ವಿಷಯವನ್ನು ತಿರುಚುವ ಮೂಲಕ, ಉಕ್ರೇನ್ ಸರಕಾರದ ಮೇಲೆ ಗೂಬೆ ಕೂರಿಸುವ ಮೂಲಕ ರಶ್ಯ, ಸಂಬಂಧಿಸಿದ ದೇಶಗಳ ಅನುಕಂಪ ಗಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದ್ದರಿಂದ ರಶ್ಯದ ಜತೆ ಉತ್ತಮ ಸ್ನೇಹ ಸಂಬಂಧ ಹೊಂದಿರುವ ಭಾರತ, ಚೀನಾ, ನೈಜೀರಿಯಾ ಸರಕಾರಗಳು ದಾಳಿ ನಿಲ್ಲಿಸಿ ನಾಗರಿಕರ ಸ್ಥಳಾಂತರಕ್ಕೆ ಅನುವು ಮಾಡಿಕೊಡುವಂತೆ ರಶ್ಯಾವನ್ನು ಕೋರಬೇಕು ಎಂದವರು ಆಗ್ರಹಿಸಿದರು.







