ಮೂರು ಕೃಷಿ ಕಾಯ್ದೆ ತಿದ್ದುಪಡಿ ವಾಪಸಾತಿಗೆ ಆಗ್ರಹಿಸಿ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ‘ಜನಜಾಗೃತಿ ಜಾಥಾ'
ಬೆಂಗಳೂರು, ಮಾ. 6: ‘ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ ಹಾಗೂ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ' ಸೇರಿ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿ ವಾಪಸಾತಿಗೆ ಆಗ್ರಹಿಸಿ ಶಿವಮೊಗ್ಗ ಜಿಲ್ಲೆ ಕಾಗೋಡಿನಿಂದ ಬೆಂಗಳೂರು, ಬೀದರ್ ಜಿಲ್ಲೆ ಬಸವ ಕಲ್ಯಾಣದಿಂದ ಬೆಂಗಳೂರು ಹಾಗೂ ಚಾಮರಾನಗರ ಜಿಲ್ಲೆ ಮಹದೇಶ್ವರ ಬೆಟ್ಟದಿಂದ ಬೆಂಗಳೂರಿಗೆ ಮೂರು ‘ಜನಜಾಗೃತಿ ಜಾಥಾ'ಗಳನ್ನು ‘ಜನಾಂದೋಲನಗಳ ಮಹಾಮೈತ್ರಿ' ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ ಈಗಾಗಲೇ ಜಾಥಾ ಆರಂಭವಾಗಿದ್ದು, ಶಿವಮೊಗ್ಗದ ಕಾಗೋಡಿನಿಂದ ಹಾಗೂ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಮಾರ್ಚ್ 9ಕ್ಕೆ ಜಾಥಾ ಆರಂಭವಾಗಲಿದೆ. ಮಾ.15ಕ್ಕೆ ಮೂರು ಜಾಥಾಗಳು ಬೆಂಗಳೂರಿನ ಮೌರ್ಯವೃತ್ತದಲ್ಲಿ ಸಮಾವೇಶಗೊಳ್ಳಲಿದ್ದು, ಹಿರಿಯ ವಕೀಲ ಪ್ರಶಾಂತ್ ಭೂಷಣ್, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್, ಸಾಹಿತಿ ದೇವನೂರು ಮಹಾದೇವ ಸೇರಿದಂತೆ ರೈತ, ದಲಿತ ಹಾಗೂ ಜನಪರ ಸಂಘಟನೆಗಳ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೇಂದ್ರ ಸರಕಾರ ರೈತರ ಐತಿಹಾಸಿಕ ಹೋರಾಟಕ್ಕೆ ಮಣಿದು ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಆದರೆ, ಕರ್ನಾಟಕ ಸರಕಾರ ಕರಾಳ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆದಿಲ್ಲ. ಹೀಗಾಗಿ ರೈತ ಹಾಗೂ ಜನಪರ ಸಂಘಟನೆಗಳ ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದ್ದು, ಕೃಷಿ ಕಾಯ್ದೆಗಳ ವಾಪಸಾತಿಗೆ ಆಗ್ರಹಿಸಲಾಗುವುದು. ಅಲ್ಲದೆ, ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಕಾಯ್ದೆ ಜಾರಿಗೆ ಒತ್ತಾಯಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.







