ಮೆಟ್ರೋ ರೈಲು ಸಂಪರ್ಕ ಸೇರಿದಂತೆ ಸಾರ್ವಜನಿಕ ಸಾರಿಗೆ ಸುಧಾರಣೆಗೆ ಕೇಂದ್ರದ ಗಮನ: ಪ್ರಧಾನಿ

photo pti
ಪುಣೆ,ಮಾ.6: ರವಿವಾರ ಇಲ್ಲಿ ಮೆಟ್ರೋ ಯೋಜನೆಯನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿಯವರು,ಮೆಟ್ರೋ ರೈಲು ಸಂಪರ್ಕ ಸೇರಿದಂತೆ ಸಮೂಹ ಸಾರಿಗೆಯನ್ನು ಉತ್ತಮಗೊಳಿಸಲು ಕೇಂದ್ರ ಸರಕಾರವು ಗಮನವನ್ನು ಕೇಂದ್ರೀಕರಿಸಿದೆ ಎಂದು ತಿಳಿಸಿದರು.
11,400 ಕೋ.ರೂ.ಒಟ್ಟು ವೆಚ್ಚದ ಪುಣೆ ಮೆಟ್ರೋ ಯೋಜನೆಗೆ ಮೋದಿಯವರು 2016,ಡಿ.24ರಂದು ಶಿಲಾನ್ಯಾಸ ನೆರವೇರಿಸಿದ್ದರು.
ಇಲ್ಲಿಯ ಎಂಐಟಿ ಕಾಲೇಜು ಮೈದಾನದಲ್ಲಿ ನಗರದಲ್ಲಿಯ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡುತ್ತಿದ್ದ ಮೋದಿ,‘ಪುಣೆ ಮೆಟ್ರೋ ಯೋಜನೆಗೆ ಶಿಲಾನ್ಯಾಸ ನೆರವೇರಿಸುವ ಅವಕಾಶ ನನಗೆ ಲಭಿಸಿದ್ದು ಮತ್ತು ಯೋಜನೆಯನ್ನು ಉದ್ಘಾಟಿಸಲು ನೀವು ಇಂದು ನನ್ನನ್ನು ಆಹ್ವಾನಿಸಿದ್ದು ನನ್ನ ಅದೃಷ್ಟ. ಹಿಂದಿನ ಸರಕಾರಗಳ ಕಾಲದಲ್ಲಿ ಶಿಲಾನ್ಯಾಸವೇನೋ ನೆರವೇರುತ್ತಿತ್ತು,ಆದರೆ ಆ ಯೋಜನೆ ಯಾವಾಗ ಉದ್ಘಾಟನೆಗೊಳ್ಳಲಿದೆ ಎನ್ನುವುದು ಯಾರಿಗೂ ಗೊತ್ತಿರುತ್ತಿರಲಿಲ್ಲ. ಪುಣೆ ಮೆಟ್ರೋ ಯೋಜನೆಯ ಉದ್ಘಾಟನೆಯು ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಬಹುದು ಎನ್ನುವುದನ್ನು ತೋರಿಸುತ್ತದೆ ’ ಎಂದು ಹೇಳಿದರು. ಮೆಟ್ರೋ ರೈಲುಗಳ ಮೂಲಕ ಸಂಚರಿಸುವಂತೆ ಅವರು ಜನರನ್ನು ಕೋರಿಕೊಂಡರು.
ನಗರೀಕರಣವು ತ್ವರಿತವಾಗಿ ಹೆಚ್ಚುತ್ತಿದೆ ಮತ್ತು 2030ರ ವೇಳೆಗೆ ದೇಶದಲ್ಲಿಯ ನಗರ ಪ್ರದೇಶಗಳ ಜನಸಂಖ್ಯೆ 60 ಕೋ.ದಾಟಲಿದೆ ಎಂದ ಅವರು,‘ನಗರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯು ಹಲವಾರು ಅವಕಾಶಗಳನ್ನು ಒದಗಿಸುತ್ತಿದೆ,ಆದರೆ ಇದೇ ವೇಳೆ ಸವಾಲುಗಳೂ ಇವೆ. ನಗರಗಳಲ್ಲಿ ಒಂದು ಮಿತಿಯವರೆಗೆ ಫ್ಲೈಓವರ್ಗಳನ್ನು ನಿರ್ಮಿಸಬಹುದು. ಜನಸಂಖ್ಯೆ ಹೆಚ್ಚುತ್ತಿರುವುದರೊಂದಿಗೆ ಎಷ್ಟು ಫ್ಲೈಓವರ್ಗಳನ್ನು ನಿರ್ಮಿಸಬಹುದು ಮತ್ತು ರಸ್ತೆಗಳ ಅಗಲೀಕರಣ ಹೇಗೆ ಸಾಧ್ಯ? ಇಂತಹ ಸ್ಥಿತಿಯಲ್ಲಿ ನಮಗೆ ಏಕೈಕ ಆಯ್ಕೆಯಿದೆ. ಅದು ಸಮೂಹ ಸಾರಿಗೆ. ಹೀಗಾಗಿ ಸಮೂಹ ಸಾರಿಗೆ ಮತ್ತು ಮೆಟ್ರೋ ರೈಲು ಸಂಪರ್ಕವನ್ನು ಹೆಚ್ಚಿಸಲು ನಮ್ಮ ಸರಕಾರವು ಮಹತ್ವವನ್ನು ನೀಡುತ್ತಿದೆ ’ ಎಂದರು.
ಈ ಮೊದಲು ದಿಲ್ಲಿ ಮತ್ತು ಒಂದೆರಡು ಇತರ ನಗರಗಳಲ್ಲಿ ಮೆಟ್ರೋ ರೈಲುಗಳಿದ್ದವು,ಆದರೆ ಈಗ ದೇಶದ ಎರಡು ಡಝನ್ಗೂ ಅಧಿಕ ನಗರಗಳಲ್ಲಿ ಮೆಟ್ರೋ ರೈಲು ಜಾಲ ಕಾರ್ಯಾಚರಿಸುತ್ತಿದೆ ಅಥವಾ ನಿರ್ಮಾಣಗೊಳ್ಳುತ್ತಿದೆ ಎಂದು ಮೋದಿ ಹೇಳಿದರು.
ಇದಕ್ಕೂ ಮೊದಲು ಪುಣೆ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿದ ಮೋದಿ ಕೌಂಟರ್ನಲ್ಲಿ ಸ್ವತಃ ಟಿಕೆಟ್ ಖರೀದಿಸಿ 10 ನಿಮಿಷಗಳ ಕಾಲ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು.
ಒಟ್ಟು 32.2 ಕಿ.ಮೀ.ಉದ್ದದ ಮೆಟ್ರೋ ರೈಲು ಯೋಜನೆಯ 12 ಕಿ.ಮೀ.ಭಾಗದ ಉದ್ಘಾಟನಾ ಕಾರ್ಯಕ್ರಮ ಗರ್ವಾರೆ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು,ಬಳಿಕ ಮೋದಿ ಸುಮಾರು ಐದು ಕಿ.ಮೀ.ದೂರದ ಆನಂದ ನಗರ ನಿಲ್ದಾಣದವರೆಗೆ ಮೆಟ್ರೋ ಪ್ರಯಾಣದ ಖುಷಿಯನ್ನು ಅನುಭವಿಸಿದರು.
ತನ್ನ 10 ನಿಮಿಷಗಳ ಪ್ರಯಾಣದ ಅವಧಿಯಲ್ಲಿ ಪ್ರಧಾನಿ ಕೆಲವು ಅಂಧರೂ ಸೇರಿದಂತೆ ಬೋಗಿಯಲ್ಲಿದ್ದ ವಿಕಲಚೇತನ ವಿದ್ಯಾರ್ಥಿಗಳ ಜೊತೆ ಸಂವಾದವನ್ನು ನಡೆಸಿದರು.
ಗರ್ವಾರೆ ನಿಲ್ದಾಣದಿಂದ ರೈಲು ಹತ್ತುವ ಮುನ್ನ ಮೋದಿ ಅಲ್ಲಿ ವ್ಯವಸ್ಥೆ ಮಾಡಲಾಗಿದ್ದ ಯೋಜನೆಯ ಪ್ರದರ್ಶನವನ್ನೂ ವೀಕ್ಷಿಸಿದರು.







