ಪುಟಿನ್ ಪರಮಾಣು ಬೆದರಿಕೆ ದಾರ್ಷ್ಟ್ಯತನ: ಬ್ರಿಟನ್

ಲಂಡನ್, ಮಾ.6: ಉಕ್ರೇನ್ ಮೇಲಿನ ದಾಳಿಯ ಸಂದರ್ಭ ಪರಮಾಣು ಅಸ್ತ್ರ ಬಳಸುವ ರಶ್ಯ ಅಧ್ಯಕ್ಷ ಪುಟಿನ್ ಅವರ ಬೆದರಿಕೆ ವಾಕ್ಚಾತುರ್ಯ ಮತ್ತು ದಾರ್ಷ್ಟ್ಯತನವಾಗಿದೆ ಎಂದು ಬ್ರಿಟನ್ ಉಪಪ್ರಧಾನಿ ಡೊಮಿನಿಕ್ ರ್ಯಾಬ್ ಬಣ್ಣಿಸಿದ್ದು , ಪಾಶ್ಚಿಮಾತ್ಯ ದೇಶಗಳು ವಿಧಿಸಿರುವ ಆರ್ಥಿಕ ದಿಗ್ಬಂಧನ ಯುದ್ಧ ಘೋಷಣೆಗೆ ಸಮ ಎಂಬ ರಶ್ಯದ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.
ಪರಮಾಣು ಶಸ್ತ್ರಾಸ್ತ್ರ ಬಳಕೆಯ ಬಗ್ಗೆ ಪುಟಿನ್ ಒಡ್ಡಿರುವ ಬೆದರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ರ್ಯಾಬ್, ನನ್ನ ಪ್ರಕಾರ ಇದೊಂದು ವಾಕ್ಚಾತುರ್ಯ ಮತ್ತು ದಾರ್ಷ್ಟ್ಯತನವಾಗಿದೆ. ಪುಟಿನ್ ಅವರಿಗೆ ತಪ್ಪು ಮಾಹಿತಿ ನೀಡುವುದು, ಹೇಳಿಕೆಯ ಮೂಲಕ ಪ್ರಚಾರ ಪಡೆಯುವ ಚಾಳಿಯಿದೆ. ಈಗ ನಡೆಯುತ್ತಿರುವ ಘಟನೆಯಿಂದ, ಅಂದರೆ ಅಕ್ರಮ ಆಕ್ರಮಣದ ಘಟನೆಯಿಂದ ಬೇರೆಡೆಗೆ ಗಮನ ಸೆಳೆಯುವ ತಂತ್ರ ಇದಾಗಿದೆ ಎಂದು ಹೇಳಿದರು.
ನಿರ್ಬಂಧಗಳನ್ನು ಯುದ್ಧಘೋಷಣೆ ಎಂದು ವಿಶ್ಲೇಷಿಸುವುದು ಸರಿಯಲ್ಲ. ಅಂತರಾಷ್ಟ್ರೀಯ ಕಾನೂನಿನಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ನಮ್ಮ ನಿರ್ಬಂಧ ಕಾನೂನು ರೀತಿಯಲ್ಲಿ ಸಮರ್ಥನೀಯವಾಗಿದೆ ಮತ್ತು ನಾವು ಮಾಡಬೇಕೆಂದಿರುವ ಉಪಕ್ರಮಕ್ಕೆ ಅನುಸಾರವಾಗಿದೆ ಎಂದ ರ್ಯಾಬ್, ರಶ್ಯಾದ ಮೇಲಿನ ರಾಜತಾಂತ್ರಿಕ ಒತ್ತಡ ಹೆಚ್ಚಲು ಚೀನಾ ಮತ್ತು ಭಾರತ ನೆರವಾಗಬೇಕು . ಚೀನಾವು ವಿಶ್ವಸಂಸ್ಥೆ ಭದ್ರತಾ ಸಮಿತಿಯ ಕಾಯಂ ಸದಸ್ಯ ದೇಶವಾಗಿದ್ದರೆ ಭಾರತವೂ ಸಮಿತಿಯ ಸದಸ್ಯ ದೇಶವಾಗಿದೆ. ರಾಜತಾಂತ್ರಿಕ ಒತ್ತಡ ಹೆಚ್ಚಿಸುವ ಅನಿವಾರ್ಯತೆ ಇದೆ ಎಂದರು







