ಸ್ವದೇಶಕ್ಕೆ ಮರಳಿದ ವಿದ್ಯಾರ್ಥಿಗಳನ್ನು ಅಭಿನಂದಿಸೋಣ
ಮಾನ್ಯರೇ,
ಉಕ್ರೇನ್‌ನ ಮೇಲೆ ರಶ್ಯ ನಡೆಸುತ್ತಿರುವ ದಾಳಿ ಖಂಡನೀಯ. ಇದೇ ಸಂದರ್ಭದಲ್ಲಿ ಅಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳನ್ನು ಮರೆತ ಸರಕಾರದ ಕ್ರಮವೂ ಖಂಡನೀಯ. ಉಕ್ರೇನ್‌ನಲ್ಲಿ ಯುದ್ಧ ಸಂಭವಿಸುತ್ತದೆ ಎನ್ನುವ ಅಂಶ ಭಾರತಕ್ಕೆ ಕೊನೆಗೂ ಗೊತ್ತಾಗಲೇ ಇಲ್ಲವೆ? ಭಾರತದ ನಾಯಕರು ಉತ್ತರ ಪ್ರದೇಶದ ಚುನಾವಣೆಯಲ್ಲಿ ಮೈಮರೆತರೇ? ಭಾರತದಲ್ಲಿ ಅವಕಾಶ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಹೆಚ್ಚಿನ ವಿದ್ಯಾಭ್ಯಾಸದ ಕನಸಿನೊಂದಿಗೆ ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳಿದರು. ಪರದೇಶದಲ್ಲಾದರೂ ಸರಿ, ತಾವು ವೈದ್ಯರಾಗಬೇಕು ಎನ್ನುವ ಆಸೆಯಿಂದ ಎಲ್ಲ ಎಡರು ತೊಡರುಗಳನ್ನು ದಾಟಿ, ತಮ್ಮ ದೇಶ, ಊರು, ಕುಟುಂಬದಿಂದ ಬೇರ್ಪಟ್ಟು ಅವರು ವಿದ್ಯೆ ಕಲಿಯುತ್ತಿದ್ದರು. ಯುದ್ಧದ ಕಾರಣದಿಂದಾಗಿ ಅವರು ಅಲ್ಲಿ ಅತಂತ್ರರಾಗಬೇಕಾಗಿದೆ. ಇಷ್ಟಾದರೂ ಅವರು ಧೈರ್ಯಗೆಡದೆ ಅಸೀಮ ಸಾಹಸದೊಂದಿಗೆ ನೂರಾರು ಕಿಲೋಮೀಟರ್ ನಡೆದು, ಕ್ಷಿಪಣಿ, ಬಂದೂಕುಗಳಿಂದ ಪಾರಾಗಿ ಕೊನೆಗೂ ಕೆಲವರು ಸ್ವದೇಶವನ್ನು ತಲುಪಿದ್ದಾರೆ. ಅವರ ಧೈರ್ಯ, ಸಾಹಸವನ್ನು ಅಭಿನಂದಿಸುವುದು ಸರಕಾರದ ಕೆಲಸ. ಆತ್ಮಸ್ಥೈರ್ಯದೊಂದಿಗೆ ಯುದ್ಧಭೂಮಿಯಿಂದ ಪಾರಾಗಿ, ಭಾರತಕ್ಕೆ ಮರಳಿದ ಎಲ್ಲ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸುವ ಹೊಣೆಗಾರಿಕೆ ಸರಕಾರದ್ದು. ಸರಕಾರ ತನ್ನ ವೈಫಲ್ಯಗಳನ್ನು ಒಪ್ಪಿಕೊಂಡು ಅವರೆಲ್ಲರಿಗೂ ಪರಿಹಾರವನ್ನು ನೀಡಬೇಕು. ಅವರ ಮುಂದಿನ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು.





