ಶ್ರೀನಗರ: ಶಂಕಿತ ಉಗ್ರರಿಂದ ಗ್ರೆನೇಡ್ ದಾಳಿ; ಓರ್ವ ಸಾವು, 20 ಮಂದಿಗೆ ಗಾಯ

ಶ್ರೀನಗರ, ಮಾ. 6: ಶ್ರೀನಗರದ ಜನದಟ್ಟಣೆಯ ಮಾರುಕಟ್ಟೆ ಪ್ರದೇಶದಲ್ಲಿ ಶಂಕಿತ ಉಗ್ರರು ರವಿವಾರ ಗ್ರೆನೇಡ್ ದಾಳಿ ನಡೆಸಿದ ಪರಿಣಾಮ ಓರ್ವ ಸಾವನ್ನಪ್ಪಿದ್ದಾರೆ ಹಾಗೂ ಇತರ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ.
‘‘ಶಂಕಿತ ಉಗ್ರರು ಅಪರಾಹ್ನ ಸುಮಾರು 4.20ಕ್ಕೆ ಹರಿಸಿಂಗ್ ಹೈಸ್ಟ್ರೀಟ್ನಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಹಾಗೂ ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ದಾಳಿ ನಡೆಸಿತು’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಯಲ್ಲಿ 71 ವರ್ಷದ ಮುಹಮ್ಮದ್ ಅಸ್ಲಂ ಮಕ್ದೂಮಿ ಮೃತಪಟ್ಟಿದ್ದಾರೆ. ಅವರು ಶ್ರೀನಗರದ ನಿವಾಸಿ.
ಗಾಯಗೊಂಡವರನ್ನು ಶ್ರೀ ಮಹಾರಾಜಾ ಹರಿ ಸಿಂಗ್(ಎಸ್ಎಂಎಚ್ಎಸ್) ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
‘‘ಶಂಕಿತ ಉಗ್ರರು ಗ್ರೆನೇಡ್ ದಾಳಿ ನಡೆಸಿದ ಸಂದರ್ಭ ಮಾರುಕಟ್ಟೆಯಲ್ಲಿ ಜನ ಸಂದಣಿ ಇತ್ತು. ಈ ಘಟನೆಯಲ್ಲಿ ಮುಹಮ್ಮದ್ ಅಸ್ಲಂ ಮಕ್ದೂಮಿ ಮೃತಪಟ್ಟರೆ, ಓರ್ವ ಯುವತಿ ಗಂಭೀರ ಗಾಯಗೊಂಡಿದ್ದಾರೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಕೇಶ್ ಬಲ್ವಾಲ್ ತಿಳಿಸಿದ್ದಾರೆ.
ಘಟನೆಯಲ್ಲಿ ಓರ್ವ ಪೊಲೀಸ್ ಕೂಡ ಗಾಯಗೊಂಡಿದ್ದಾರೆ. ಘಟನೆ ಸಂಭವಿಸಿದ ಕೂಡಲೇ ಹಿರಿಯ ಅಧಿಕಾರಿಗಳು ಸೇರಿದಂತೆ ಭದ್ರತಾ ಪಡೆ ಸ್ಥಳಕ್ಕೆ ಧಾವಿಸಿದೆ ಹಾಗೂ ಪ್ರದೇಶವನ್ನು ಸುತ್ತುವರಿದಿದೆ. ಶಂಕಿತ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.







