ರಾಷ್ಟ್ರೀಯ ಭದ್ರತೆ ನೆಲೆಯಲ್ಲಿ ಆರ್ ಟಿ ಐ ಅರ್ಜಿ ತಿರಸ್ಕಾರ ಶೇ. 83ರಷ್ಟು ಹೆಚ್ಚಳ: ವರದಿ

ಹೊಸದಿಲ್ಲಿ: ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅನ್ವಯ 2020-21ನೇ ವರ್ಷದಲ್ಲಿ ಸಲ್ಲಿಸಿರುವ ಅರ್ಜಿಗಳ ಪೈಕಿ ರಾಷ್ಟ್ರೀಯ ಭದ್ರತೆ ನೆಲೆಯಲ್ಲಿ ಕೇಂದ್ರ ಸರ್ಕಾರಿ ಸಚಿವಾಲಯಗಳು ತಿರಸ್ಕರಿಸಿರುವ ಅರ್ಜಿಗಳ ಸಂಖ್ಯೆ ಕಳೆದ ವರ್ಷ ಶೇಕಡ 83ರಷ್ಟು ಏರಿಕೆಯಾಗಿರುವ ಅಂಶ ಬಹಿರಂಗವಾಗಿದೆ. ಒಟ್ಟಾರೆ ತಿರಸ್ಕೃತವಾದ ಅರ್ಜಿಗಳ ಪ್ರಮಾಣ ಶೇಕಡ 2.95ಕ್ಕೇರಿದೆ ಎನ್ನುವುದು ಆರ್ಟಿಐ ಅರ್ಜಿಗಳ ವಿಶ್ಲೇಷಣೆಯಿಂದ ತಿಳಿದು ಬಂದಿದೆ ಎಂದು hindustantimes.com ವರದಿ ಮಾಡಿದೆ.
ಕಾಮನ್ವೆಲ್ತ್ ಮಾನವಹಕ್ಕುಗಳ ಉಪಕ್ರಮ (ಸಿಎಚ್ಆರ್ಐ)ನ ವೆಂಕಟೇಶ ನಾಯಕ್ ಎಂಬವರು ವಿವಿಧ ಕೇಂದ್ರ ಸರ್ಕಾರಿ ಸಚಿವಾಲಯಗಳ 2182 ಇಲಾಖೆಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಅರ್ಜಿಗಳು ತಿರಸ್ಕೃತವಾಗಲು ಕಾರಣಗಳನ್ನು ವಿಶೇಷಿಸಿದ್ದಾರೆ. ಪ್ರತಿ ಸಚಿವಾಲಯವೂ ವಾರ್ಷಿಕವಾಗಿ ಕೇಂದ್ರ ಮಾಹಿತಿ ಆಯೋಗಕ್ಕೆ ಆರ್ಟಿಐ ಅರ್ಜಿಗಳ ಸ್ಥಿತಿಗತಿ ವರದಿಯನ್ನು ಸಲ್ಲಿಸಬೇಕಾಗುತ್ತದೆ.
2019-20ರಲ್ಲಿ ಕೇಂದ್ರ ಸರ್ಕಾರದ ಸಚಿವಾಲಯಗಳು ಹಾಗೂ ಇಲಾಖೆಗಳು 12.9 ಲಕ್ಷ ಆರ್ಟಿಐ ಅರ್ಜಿಗಳನ್ನು ಸಲ್ಲಿಸಿದ್ದು, ಇದು ಹಿಂದಿನ ವರ್ಷ ಸಲ್ಲಿಸಿದ ಅರ್ಜಿಗಳಿಗಿಂತ ಶೇಕಡ 2.48ರಷ್ಟು ಕಡಿಮೆ. ಈ ಅವಧಿಯಲ್ಲಿ ಒಟ್ಟು 13.3 ದಶಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಅತಿಹೆಚ್ಚು ಆರ್ಟಿಐ ಅರ್ಜಿಗಳ ಹೆಚ್ಚಳ ಕಂಡುಬಂದಿರುವುದು ಆರೋಗ್ಯ ಮತ್ತು ಉಕ್ಕು ಸಚಿವಾಲಯಗಳಲ್ಲಿ.
ಈ ಪೈಕಿ 55,537 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, 1024 ಅರ್ಜಿಗಳನ್ನು ರಾಷ್ಟ್ರೀಯ ಭದ್ರತೆ ನೆಲೆಯಲ್ಲಿ ತಿರಸ್ಕರಿಸಲಾಗಿದೆ. ಇದು ಹಿಂದಿನ ವರ್ಷ ಈ ನೆಲೆಯಲ್ಲಿ ತಿರಸ್ಕರಿಸಿದ ಅರ್ಜಿಗಳ ಸಂಖ್ಯೆ (557)ಗಿಂತ ಅಧಿಕ ಎಂದು hindustantimes.com ವರದಿ ಮಾಡಿದೆ.
"ಒಟ್ಟಾರೆ ತಿರಸ್ಕಾರ ಪ್ರಮಾಣ ಕಡಿಮೆಯಾಗಿದ್ದರೂ, ಸರ್ಕಾರ ಅರ್ಜಿಗಳನ್ನು ತಿರಸ್ಕರಿಸಲು ಆರ್ಟಿಐ ಕಾಯ್ದೆಯ ನಿಬಂಧನೆ 8(1)ನ್ನು ಹೆಚ್ಚು ಹೆಚ್ಚಾಗಿ ಬಳಸುತ್ತಿದೆ. ಇದರ ಅನ್ವಯ ರಾಷ್ಟ್ರೀಯ ಭದ್ರತೆಯ ನೆಲೆಯಲ್ಲಿ ಮಾಹಿತಿ ನೀಡಿಕೆಯಿಂದ ವಿನಾಯ್ತಿ ಇದೆ. ಗ್ರಾಹಕ ವ್ಯವಹಾರಗಳ ಸಚಿವಾಲಯ ಸಾಂಕ್ರಾಮಿಕದ ವರ್ಷ ರಾಷ್ಟ್ರೀಯ ಭದ್ರತೆ ನೆಪ ನೀಡಿ 401 ಅರ್ಜಿಗಳನ್ನು ತಿರಸ್ಕರಿಸಿದೆ. ಇದು ಆತಂಕಕಾರಿ ಪ್ರವೃತ್ತಿ" ಎಂದು ವೆಂಕಟೇಶ ನಾಯಕ್ ಹೇಳುತ್ತಾರೆ.







