ರಾಜ್ಯದ ತಲಾದಾಯ; ಯಾವ ಜಿಲ್ಲೆಯಲ್ಲಿ ಎಷ್ಟು ಗೊತ್ತೇ?

ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ತಲಾದಾಯ ಕಲ್ಬುರ್ಗಿ ಜಿಲ್ಲೆಯ ತಲಾದಾಯದ ಐದು ಪಟ್ಟು ಅಧಿಕ ಎಂಬ ಚಿತ್ರಣ 2021-22ರ ಆರ್ಥಿಕ ಸಮೀಕ್ಷೆಯಿಂದ ಬಹಿರಂಗಗೊಂಡಿದೆ ಎಂದು deccanherald.com ವರದಿ ಮಾಡಿದೆ.
ಕಲ್ಬುರ್ಗಿ ಸೇರಿದಂತೆ ರಾಜ್ಯದಲ್ಲಿ ಕನಿಷ್ಠ ತಲಾದಾಯ ಹೊಂದಿರುವ ನಾಲ್ಕು ಜಿಲ್ಲೆಗಳು ಐತಿಹಾಸಿಕವಾಗಿ ಹಿಂದುಳಿದ ಜಿಲ್ಲೆಗಳು ಎನಿಸಿಕೊಂಡಿರುವ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೇರಿದವುಗಳಾಗಿವೆ. ಬೆಂಗಳೂರು ನಗರ ಜಿಲ್ಲೆಯ ತಲಾದಾಯ ರಾಜ್ಯದಲ್ಲೇ ಅತ್ಯಧಿಕ ಅಂದರೆ 5,51,638 ರೂಪಾಯಿ. ಆದರೆ ಕಲ್ಬುರ್ಗಿಯ ತಲಾದಾಯ 1,00,446 ರೂಪಾಯಿ ಆಗಿದ್ದು, ಇದು ರಾಜ್ಯದಲ್ಲೇ ಕನಿಷ್ಠ. 3,71,771 ರೂಪಾಯಿ ತಲಾದಾಯ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ತದ್ವಿರುದ್ಧವಾಗಿ ಬೆಳಗಾವಿ ಜಿಲ್ಲೆ 22ನೇ ಸ್ಥಾನಲ್ಲಿದ್ದು, ಕೇವಲ 1,16,510 ರೂಪಾಯಿ ತಲಾದಾಯ ಹೊಂದಿದೆ.
ಸಮೀಕ್ಷೆ 30 ಜಿಲ್ಲೆಗಳ ಅಂಕಿ ಅಂಶಗಳನ್ನು ಒದಗಿಸುತ್ತಿದ್ದು, 26 ಜಿಲ್ಲೆಗಳ ತಲಾದಾಯ, ಬೆಂಗಳೂರು ನಗರ ಜಿಲ್ಲೆಯ ತಲಾದಾಯಕ್ಕಿಂತ ಅರ್ಧದಷ್ಟು ಮಾತ್ರ ಇದೆ. ರಾಜ್ಯದ ಜಿಡಿಪಿಗೆ ಬೆಂಗಳೂರು ನಗರ ಜಿಲ್ಲೆಯ ಕೊಡುಗೆ ಶೇಕಡ 36.9ರಷ್ಟಾಗಿದ್ದು, ಶೇಕಡ 5.7ರಷ್ಟು ಕೊಡುಗೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಬೆಳಗಾವಿ ಜಿಲ್ಲೆ (4.3%) ಮೂರನೇ ಸ್ಥಾನದಲ್ಲಿದೆ.
ಜಿಲ್ಲಾವಾರು ಆರ್ಥಿಕ ಅಭಿವೃದ್ಧಿಯ ಮಟ್ಟ ಮತ್ತು ಪ್ರಗತಿಯ ಮಾಪನ, ಅಂತರ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಆರ್ಥಿಕ ಪ್ರಗತಿಯ ಪ್ರಕ್ರಿಯೆಯ ವ್ಯತ್ಯಯದ ಸ್ವರೂಪ ಮತ್ತು ಪ್ರಮಾಣವನ್ನು ಅಳೆಯಲು ಉಪಯುಕ್ತ ನೀತಿ ಸೂಚಕವಾಗಿದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.
ವಿಭಾಗವಾರು ಅಂಕಿ ಅಂಶಗಳನ್ನು ಪರಿಗಣಿಸಿದರೂ ವ್ಯತ್ಯಾಸ ಎದ್ದು ಕಾಣುತ್ತದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳನ್ನು ಒಳಗೊಂಡ ಬೆಂಗಳೂರು ವಿಭಾಗದ ತಲಾದಾಯ ರೂ. 3,26,099. ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಮೈಸೂರು ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ಮೈಸೂರು ವಿಭಾಗ ರೂ. 2,23,305 ರೂಪಾಯಿ ತಲಾದಾಯದೊಂದಿಗೆ ಎರಡನೇ ಸ್ಥಾನದಲ್ಲಿದೆ. ಬೆಳಗಾವಿ ವಿಭಾಗದ ತಲಾದಾಯ 1,37,089 ರೂಪಾಯಿ ಆಗಿದ್ದರೆ, ಕಲ್ಬುರ್ಗಿ ವಿಭಾಗದ ತಲಾದಾಯ ಕೇವಲ 1,23,489 ರೂಪಾಯಿ ಎಂದು deccanherald.com ವರದಿ ಮಾಡಿದೆ.
ಇದನ್ನೂ ಓದಿ: ಭಾರತದ ಫೆಲೆಸ್ತೀನ್ ರಾಯಭಾರಿ ಮುಕುಲ್ ಆರ್ಯ ನಿಗೂಢ ಸಾವು







