ಉತ್ತರಪ್ರದೇಶದಲ್ಲಿ ಇಂದು 7ನೇ, ಕೊನೆಯ ಹಂತದ ಮತದಾನ
ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರ ವಾರಣಾಸಿಯತ್ತ ಎಲ್ಲರ ಚಿತ್ತ

Photo: ANI
ಲಕ್ನೊ: ಉತ್ತರ ಪ್ರದೇಶದಲ್ಲಿ ಏಳು ಹಂತದ ಮಹಾ ಚುನಾವಣೆಯ ಕೊನೆಯ ಹಂತ ಸೋಮವಾರ ನಡೆಯುತ್ತಿದ್ದು, 54 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಈ ಸುತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಸ್ಥಾನವಾದ ವಾರಣಾಸಿಯತ್ತ ಎಲ್ಲರ ಕಣ್ಣು ನೆಟ್ಟಿದೆ.
ಇಂದು ಮತದಾನ ನಡೆಯಲಿರುವ 54 ವಿಧಾನಸಭಾ ಕ್ಷೇತ್ರಗಳು ಒಂಬತ್ತು ಜಿಲ್ಲೆಗಳಾದ ಅಝಂಗಢ, ಮೌ, ಜೌನ್ಪುರ್, ಗಾಝಿಪುರ, ಚಂದೌಲಿ, ವಾರಣಾಸಿ, ಮಿರ್ಝಾಪುರ, ಭದೋಹಿ ಹಾಗೂ ಸೋನ್ಭದ್ರ ಹರಡಿಕೊಂಡಿವೆ.
ವಾರಣಾಸಿ ಹಾಗೂ ಅದರ ಪಕ್ಕದ ಜಿಲ್ಲೆಗಳಾದ ಬನಾರಸ್ ಸಿಟಿ ಸೌತ್, ಬನಾರಸ್ ಸಿಟಿ ನಾರ್ತ್, ಶಿವಪುರ, ಸೇವಾಪುರಿ, ಕಂಟೋನ್ಮೆಂಟ್, ಅಜ್ಗರ, ಪಿಂದ್ರಾ ಮತ್ತು ರೊಹನಿಯಾದ ಎಂಟು ಸ್ಥಾನಗಳು ಬಹುಕೋನ ಸ್ಪರ್ಧೆಗೆ ಸಾಕ್ಷಿಯಾಗಿವೆ.
ಕಳೆದ ಬಾರಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಈ ಪ್ರದೇಶದಲ್ಲಿ ಮುನ್ನಡೆ ಸಾಧಿಸಿದ್ದವು. ಆರು ಸ್ಥಾನಗಳು ಬಿಜೆಪಿ ಪಾಲಾಗಿದ್ದವು. ಉಳಿದ ಎರಡರಲ್ಲಿ ಬಿಜೆಪಿ ಮಿತ್ರ ಪಕ್ಷವಾದ ಅನುಪ್ರಿಯಾ ಪಟೇಲ್ ಅವರ ಅಪ್ನಾ ದಳ (ಎಸ್) ಗೆ ಒಂದು ಸ್ಥಾನ ಮತ್ತು ಈಗ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಪಾಲುದಾರರಾಗಿರುವ ಓಂ ಪ್ರಕಾಶ್ ರಾಜ್ಭರ್ ಅವರ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಎಸ್ಬಿಎಸ್ಪಿ) ಗೆ ಒಂದು ಸ್ಥಾನ ಲಭಿಸಿತ್ತು.





