ಕುಂದಾಪುರ: ಉಚಿತ ಆಯುಷ್ಮಾನ್ ಕಾರ್ಡ್, ಈ-ಶ್ರಮ್ ಕಾರ್ಡ್ ಶಿಬಿರ
ಕುಂದಾಪುರ: ಚಿಕಿತ್ಸೆಯ ಸಂಕಷ್ಟದ ಸನ್ನಿವೇಶದಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಅಸಂಘಟಿತ ಕಾರ್ಮಿಕರಿಗೆ ಸರಕಾರದ ಸೌಲಭ್ಯಗಳನ್ನುಒದಗಿಸುವ ನಿಟ್ಟಿನಲ್ಲಿ ನಮ್ಮ ನಾಡ ಒಕ್ಕೂಟ (ರಿ) ಕುಂದಾಪುರ ಘಟಕ ಮತ್ತು ಮುಸ್ಲಿಮ್ ವೆಲ್ಫೇರ್ ಅಸೊಸಿಯೇಷನ್ ಕುಂದಾಪುರ ಜಂಟಿ ಆಶ್ರಯದಲ್ಲಿ ತಾಲೂಕು ಅಧ್ಯಕ್ಷ ದಸ್ತಗೀರ್ ಕಂಡ್ಲೂರ್ ಅಧ್ಯಕ್ಷತೆಯಲ್ಲಿ ಆಯುಷ್ಮಾನ್ ಕಾರ್ಡ್ ಮತ್ತು ಈಶ್ರಮ್ ಕಾರ್ಡ್ ಶಿಬಿರವು ಕುಂದಾಪುರದ ಜಾಮಿಯ ಮಸೀದಿ ಹಾಲಿನಲ್ಲಿ ಜರುಗಿತು.
ವಸೀಮ್ ಬಾಷಾ (ಅಧ್ಯಕ್ಷರು, ಮುಸ್ಲಿಮ್ ಜಮಾತ್ ಕುಂದಾಪುರ) ಅವರ ಕಿರಾಅತ್ ಮೂಲಕ ಸಮಾರಂಭವನ್ನು ಪ್ರಾರಂಭಿಸಲಾಯಿತು.
ಡಾ. ತೇಜಸ್ವಿನಿ ಎ. (ಜಿಲ್ಲಾ ಸಂಯೋಜಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಉಡುಪಿ) ಆಯುಷ್ಮಾನ್ ಕಾರ್ಡ್ ನ ಉಪಯುಕ್ತತೆ ಮತ್ತು ಪ್ರಯೋಜನದ ಬಗ್ಗೆ ವಿವರಿಸಿದರು.
ನಮ್ಮ ನಾಡ ಒಕ್ಕೂಟ ಬೈಂದೂರು ಘಟಕದ ಅಧ್ಯಕ್ಷ ಅಬ್ದುಲ್ ಸಮಿ ಹಳಗೇರಿ ಮಾತನಾಡಿ, ನಮ್ಮ ನಾಡ ಒಕ್ಕೂಟದ ಧ್ಯೇಯೊದ್ದೇಶ ಮತ್ತು ಮುಂದಿನ ದಿನಗಳಲ್ಲಿ ಮುಸ್ಲಿಮ್ ವೆಲ್ಫೇರ್ ಅಸೊಸಿಯೇಷನ್ ನ ಜೊತೆಗೂಡಿ ಆರೋಗ್ಯ ಸೇವೆ, ಯುವಕರಿಗೆ ಶೈಕ್ಷಣಿಕ ಮಾರ್ಗದರ್ಶನ ಮತ್ತು ವೃತ್ತಿ ಮಾರ್ಗದರ್ಶನ ನೀಡುವ ಮೂಲಕ ಸಮುದಾಯದ ಹಿಂದುಳಿಕೆಯನ್ನುಹೋಗಲಾಡಿಸುವ ವಿವಿಧ ಕಾರ್ಯಕ್ರಮಳನ್ನು ಕೈಗೊಳ್ಳುವರು ಎಂದು ತಿಳಿಸಿದರು.
ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಅಬು ಮುಹಮ್ಮದ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಮ್ ವೆಲ್ಫೇರ್ ಅಸೊಸಿಯೇಷನ್ ಇದರ ಅಧ್ಯಕ್ಷರಾದ ನವಾಝ್, ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾಸದಸ್ಯ ಅಬ್ದುಲ್ ಕಾದರ್ ಮೂಡುಗೋಪಾಡಿ ಮತ್ತು ಜಮಾತಿನ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ. ತೇಜಸ್ವಿನಿ ಅವರನ್ನು ಸನ್ಮಾನಿಸಲಾಯಿತು.
ಸಹಾದ್ ಬೆಳಪು ಮತ್ತು ಪ್ರಕಾಶ್ ಇವರ ತಂಡ ಆಯುಷ್ಮಾನ್ ಕಾರ್ಡ್ ಮಾಡಿಕೊಟ್ಟರು. ಈ-ಶ್ರಮ್ ಕಾರ್ಡ್ ಮಾಡಿಕೊಡಲು ಮುಸ್ತಫಾ ಕುಂದಾಪುರ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು.