ಆಳಂದ ಪ್ರಕರಣ: 165 ಅಮಾಯಕ ಜನರ ಬಂಧನ; ಜಾಯಿಂಟ್ ಆ್ಯಕ್ಷನ್ ಕಮಿಟಿ ಆರೋಪ
''ಸಂಘಪರಿವಾರದ ವ್ಯವಸ್ಥಿತ ಷಡ್ಯಂತ್ರ''

ಕಲಬುರಗಿ: ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದ ಆವರಣದಲ್ಲಿ ನಡೆದ ಘಟನೆಗೆ ಜಿಲ್ಲಾಡಳಿತ ಹಾಗೂ ಪೊಲೀಸರ ವರ್ತನೆಯಿಂದಾಗಿ ಅಲ್ಲಿನ ಭದ್ರತೆ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ಮುಸ್ಲಿಂ ಪೊಲಿಟಿಕಲ್ ಫೋರಂನ ರಾಜ್ಯ ಕಾರ್ಯದರ್ಶಿ ಸಿರಾಜ್ ಜಾಫ್ರೀ ಅವರು ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಜಾಯಿಂಟ್ ಆ್ಯಕ್ಷನ್ ಕಮಿಟಿ ನಿಯೋಗದ ಒಕ್ಕೂಟದಿಂದ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದ ಬಿಜೆಪಿಯ ಸಂಸದ ಹಾಗೂ ಶಾಸಕರ ಕುಮ್ಮಕ್ಕಿನಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಮಾರ್ಚ್ 1 ರಂದು ಅಹಿತಕ ಘಟನೆಗೆ ಕಾರಣವಾಗಿದೆ. ಇದು ಬಿಜೆಪಿ ಹಾಗೂ ಆರೆಸ್ಸೆಸ್ ಸಂಘಟನೆಗಳ ಕಾರ್ಯಕರ್ತರ ಪೂರ್ವ ನಿಯೋಜಿತ ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಅಸಮಾಧಾನ ಹೊರಹಾಕಿದರು.
ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸದೇ ನೈತಿಕ ಕಾರ್ಯನಿರ್ವಹಿಸಿ ಬಿಜೆಪಿಯ ಕೇಂದ್ರ ಸಚಿವ, ಶಾಸಕರ ಹಾಗೂ ಹಿಂದೂಪರ ಸಂಘಟನೆಗಳ ಒತ್ತಡಕ್ಕೆ ಮಣಿದು ಒಂದೆ ಧರ್ಮಿಯರ 165ಕ್ಕೂ ಹೆಚ್ಚಿನ ಅಮಾಯಕರನ್ನು ಬಂಧಿಸಿರುವುದು ಪೊಲೀಸರ ಲೋಪ ಎದ್ದು ಕಾಣುತ್ತದೆ ಎಂದರು.
ಫೆ. 25 ರಂದು ಆಳಂದ ಪಟ್ಟಣದಲ್ಲಿ ನಿಷೇಧಾಜ್ಞೆ ಹೇರಿದ್ದಾರೆ, ಅಲ್ಲದೇ ಹಿಂದೂಪರ ಸಂಘಟನೆಗಳ ಪ್ರಮುಖರಾದ ಪ್ರಮೋದ್ ಮುತಾಲಿಕ್, ಆಂದೋಲಾಶ್ರೀ ಸಿದ್ಧಲಿಂಗ ಸ್ವಾಮೀಜಿ ಹಾಗೂ ಚೈತ್ರಾ ಕುಂದಾಪುರ ಅವರಿಗೆ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧಿಸಿದ್ದಾರೆ. ಈ ಕುರಿತು ಆಳಂದದಲ್ಲಿ 144 ಸೆಕ್ಷನ್ ನಿಷೇಧ ಹೇರಿದರೂ ಆಡಳಿತ ಪಕ್ಷದ ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಸ್ಥಳೀಯ ಬಿಜೆಪಿ ಶಾಸಕರನ್ನು ದರ್ಗಾದ ಆವರಣದಲ್ಲಿ ಸೇರಿ 144 ಸೆಕ್ಷನ್ ಉಲ್ಲಂಘನೆ ಮಾಡಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಿದ್ದವಿಲ್ಲ, ಬದಲಾಗಿ ಅಮಾಯಕರನ್ನು ಗುರಿಯಾಗಿಸಿ ಪ್ರಕರಣ ದಾಖಲಿಸಿರುವುದು ಜ್ವೈಂಟ್ ಆ್ಯಕ್ಷನ್ ಕಮಿಟಿ ಕಠೋರವಾಗಿ ಖಂಡಿಸುತ್ತದೆ ಎಂದರು.
144 ಸೆಕ್ಷನ್ ವಿಧಿಸಿದರೂ ಅತ್ತ ಪಾದಯಾತ್ರೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನೆ ನೀಡುತ್ತಿರುವುದು ಜಿಲ್ಲಾಡಳಿತ ಗಮನಿಸಿಲ್ಲ, ಆ ಕೂಡಲೇ ಅವರ ವಿರುದ್ಧವೂ ಪ್ರಕರಣ ದಾಖಲಿಸಿ ಭದ್ರತೆ ಕಾಪಾಡಬಹುದಿತ್ತು, ಆದರೆ ಆ ಕೆಲಸ ಮಾಡಿಲ್ಲ ಎಂದು ಹೇಳಿದ ಅವರು, ಸರ್ಕಾರಿ ವಾಹನಗಳಿಗೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಉಳಿದ ಅಮಾಯಕರನ್ನು ಬಿಡುಗಡೆಗೊಳಿಸಬೇಕೆಂದು ಈ ವೇಳೆ ಆಗ್ರಹಿಸಿದರು.
ಈ ಪ್ರಕರಣಕ್ಕೆ ಒಂದು ವೇಳೆ 144 ಸೆಕ್ಷನ್ ಉಲ್ಲಂಘಿಸಿದ ಸಂಸದ, ಶಾಸಕರ ಮೇಲೆ ಪ್ರಕರಣ ದಾಖಲಿಸಿ ಬಂಧಿಸದಿದ್ದರೆ, ಕಾನೂನು ದುರ್ಬಳಕೆ ಮಾಡಿಕೊಂಡ ವಿವಿಧ ಅಧಿಕಾರಿಗಳ ವಿರುದ್ಧ ನೇರವಾಗಿ ಹೈಕೋರ್ಟ್‍ಗೆ ದೂರು ಕೊಡಲಿದ್ದೇವೆಂದು ಸಿರಾಜ್ ಜಾಫ್ರೀ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸೈಯ್ಯದ್ ಅಝರ್ ಅಲಿ, ರಹೀಮ್ ಪಟೇಲ್, ಎಂ.ಡಿ ನೂಹ್, ಅಫ್ಜಲ್ ಮಹಮ್ಮದ್, ಮಝರ್ ಹುಸೈನ್, ಶಾಹೀದ್ ನಾಸೀರ್ ಹಾಗೂ ಜಾಯಿಂಟ್ ಆ್ಯಕ್ಷನ್ ಕಮಿಟಿ ನಿಯೋಗದ ಸದಸ್ಯರು ಹಾಜರಿದ್ದರು.







