ನಮ್ಮ ಕ್ಷೇತ್ರದ ಪ್ರಭಾವಿ ದೇವರುಗಳು ನಿಮಗೆ ಆಶೀರ್ವಾದ ಮಾಡಲಿವೆ, ಅನುದಾನ ಕೊಡಿ: ಸದನದಲ್ಲಿ ಕಾಂಗ್ರೆಸ್ ಶಾಸಕನ ಮನವಿ

ಬೆಂಗಳೂರು, ಮಾ. 7: ‘ನನ್ನ ಕ್ಷೇತ್ರದಲ್ಲಿಯೂ ಬಹಳ ಪ್ರಭಾವಿ ದೇವಾನುದೇವತೆಗಳಿದ್ದು, ಅವುಗಳ ಅಭಿವೃದ್ಧಿಗೂ ಹಣ ಬಿಡುಗಡೆ ಮಾಡಿದರೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಒಳ್ಳೆಯದಾಗಲೆಂದು ಆ ದೇವರುಗಳು ಅವರಿಗೆ ಆಶೀರ್ವಾದ ಮಾಡಲಿವೆ' ಎಂದು ಕಾಂಗ್ರೆಸ್ ಸದಸ್ಯ ಆನಂದ್ ಸಿದ್ದು ನ್ಯಾಮಗೌಡ ಹೇಳಿದ್ದು ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು.
ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಜಮಖಂಡಿ ಕ್ಷೇತ್ರಕ್ಕೆ 2021-22ನೆ ಸಾಲಿನಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಆರ್ಥಿಕ ಇಲಾಖೆ 2 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿಲ್ಲ. ಆದುದರಿಂದ ಪ್ರಸಕ್ತ ಸಾಲಿನಲ್ಲಿ ಅನುದಾನ ಬಿಡುಗಡೆ ಮಾಡಲು ಸಾಧ್ಯವಿಲ್ಲ' ಎಂದು ಸಚಿವರು ಉತ್ತರ ನೀಡಿದ್ದಾರೆ. ಆದರೆ, ನಮ್ಮ ಕ್ಷೇತ್ರದಲ್ಲಿಯೂ ಪ್ರಭಾವಿ ದೇವರುಗಳಿವೆ' ಎಂದು ಹೇಳಿದರು.
ಇದಕ್ಕೆ ಮಸಾಲೆ ಬೆರೆಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ‘ನಿಮ್ಮ ಕ್ಷೇತ್ರದಲ್ಲಿರುವ ದೇವರುಗಳು ಸಚಿವರಿಗಷ್ಟೇ ಆಶೀರ್ವಾದ ಮಾಡುತ್ತವೆಯೋ ಅಥವಾ ಎಲ್ಲರಿಗೂ ಒಳ್ಳೆಯದು ಆಗಲಿ ಎಂದು ಆಶೀರ್ವಾದ ಮಾಡುತ್ತವೆಯೋ? ಇಲ್ಲ ಅನುದಾನದ ಮೇಲೆ ಆಶೀರ್ವಾದದ ಪ್ರಮಾಣ ನಿರ್ಧಾರವಾಗುತ್ತೋ’ ಎಂದು ಪ್ರಶ್ನಿಸಿದರು. ಆಗ ‘ಅನುದಾನ ಕೊಟ್ಟರೆ ಸಚಿವರಿಗೆ ಒಳ್ಳೆಯದು ಆಗುತ್ತದೆ’ ಎಂದು ಆನಂದ್ ಸಿದ್ದು ನ್ಯಾಮಗೌಡ ಹೇಳಿದ್ದು ಸದನ ನಗೆ ಅಲೆಯಲ್ಲಿ ತೇಲಿತು.
ಬಳಿಕ ಉತ್ತರ ನೀಡಿದ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ‘ಹಣಕಾಸಿನ ಲಭ್ಯತೆ ನೋಡಿಕೊಂಡು ಮುಜರಾಯಿ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಿಗೆ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಬಹುತೇಕ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯ ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ ಎಂದರು.
ಅನುದಾನ ಬಿಡುಗಡೆ ಸಂಬಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಯಲ್ಲಿಯೂ ಸಮಾಲೋಚನೆ ನಡೆಸಿ ಹಣ ಬಿಡುಗಡೆ ಮಾಡಲಾಗುವುದು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದೇವಸ್ಥಾನಗಳಿಗೆ ಹೆಚ್ಚಿನ ಅನುದಾನವನ್ನು ನೀಡಿದೆ. ಬಜೆಟ್‍ನಲ್ಲಿ ದೇವಸ್ಥಾನಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದರು.







