ಹಿಜಾಬಿಗೆ ವಿರೋಧ; ಹಲ್ಲೆಗೊಳಗಾದ ವಿದ್ಯಾರ್ಥಿನಿಯ ಮೇಲೆಯೇ ಪ್ರಕರಣ ದಾಖಲು: ಸಿಎಫ್ಐ ಆರೋಪ

ಮಂಗಳೂರು, ಮಾ. 7: ನಗರದ ದಯಾನಂದ ಪೈ-ಸತೀಶ್ ಪೈ ಸರಕಾರಿ ಪದವಿ ಕಾಲೇಜಿನಲ್ಲಿ ಕಳೆದ ಶುಕ್ರವಾರ ಎಬಿವಿಪಿ ಕಾರ್ಯಕರ್ತರಿಂದ ಬೆದರಿಕೆ ಹಾಗೂ ಹಲ್ಲೆಗೊಳಗಾಗಿದ್ದ ವಿದ್ಯಾರ್ಥಿನಿ ಹಿಬಾ ಶೇಕ್ ಮೇಲೆಯೇ ಬಂದರು ಪೊಲೀಸರು ಪ್ರಕರಣ ದಾಖಲಿಸಿರುವುದು ಖಂಡನೀಯ. ಇದು ಆಡಳಿತ ವರ್ಗದ ಪ್ರಚೋದಿತ ದೌರ್ಜನ್ಯ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯೆ ಮುರ್ಶಿದಾ ಮಂಗಳೂರು ಆರೋಪಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿನಿ ಹಿಬಾ ಶೇಕ್ ತನಗೆ ಬೆದರಿಕೆಯೊಡ್ಡಿ ಹಲ್ಲೆ ನಡೆಸಿದವರ ವಿರುದ್ಧ ಬಂದರು ಠಾಣೆಗೆ ದೂರು ನೀಡಿದ್ದರು. ಈ ಮಧ್ಯೆ ಅನ್ಯಾಯಕ್ಕೊಳಗಾದ ವಿದ್ಯಾರ್ಥಿನಿಯರ ವಿರುದ್ಧ ಕಾಲೇಜಿನ ಎಬಿವಿಪಿ ಘಟಕದ ಕಾರ್ಯದರ್ಶಿ ಕವನಾ ಶೆಟ್ಟಿ ಆಧಾರವಿಲ್ಲದ ದೂರನ್ನು ಪರಿಗಣಿಸಿ ಸಂತ್ರಸ್ತ ವಿದ್ಯಾರ್ಥಿನಿಯರ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುವ ಬಿಜೆಪಿ ಮುಸ್ಲಿಮರನ್ನು ತುಳಿಯಲು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈ ನೆಲದ ಕಾನೂನಿನ ಮೇಲೆ ನಂಬಿಕೆಯನ್ನಿಟ್ಟು, ನ್ಯಾಯಕ್ಕಾಗಿ ಠಾಣೆಗೆ ಹೋದರೆ ಅನ್ಯಾಯಕ್ಕೊಳಗಾದವರ ವಿರುದ್ಧವೇ ಹಗೆ ಸಾಧಿಸಲಾಗುತ್ತಿರುವುದು ವಿಪರ್ಯಾಸ. ಕಾನೂನಿನ ಮೇಲೆ ಸಂವಿಧಾನದ ಹಿಡಿತವಿಲ್ಲ. ಬದಲಾಗಿ ಸರಕಾರದ ಹಿಡಿತದಲ್ಲಿ ಕಾನೂನು ಕಾರ್ಯಚರಿಸುತ್ತಿದೆ. ಇದಕ್ಕೆ ತಕ್ಕ ಮಟ್ಟದ ಪ್ರತಿರೋಧದ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ಹಿಬಾ ಶೇಕ್ ಸಹಿತ 6 ಮಂದಿ ವಿದ್ಯಾರ್ಥಿನಿಯರ ಮೇಲೆಯೇ ದೂರು ದಾಖಲಾಗಿದೆ. ತಕ್ಷಣ ಈ ಪ್ರಕರಣವನ್ನು ಹಿಂಪಡೆಯಬೇಕು, ವಿದ್ಯಾರ್ಥಿನಿಯರಿಗೆ ಜೀವ ಬೆದರಿಕೆಯಿದ್ದು ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ನೀಡಬೇಕು. ಹಿಬಾ ಶೇಕ್ ಮೇಲೆ ದಾಳಿಗೆ ಮುಂದಾದ ಎಬಿವಿಪಿ ಕಾರ್ಯಕರ್ತರನ್ನು ತಕ್ಷಣ ಬಂಧಿಸಬೇಕು. ಕಾಲೇಜುಗಳಲ್ಲಿ ಅನಾವಶ್ಯಕ ಸಮಸ್ಯೆ ಸೃಷ್ಟಿಸುತ್ತಿರುವ ಎಬಿವಿಪಿ ಕಾರ್ಯಕರ್ತರ ಮೇಲೆ ಇಲಾಖೆಯು ಸ್ವಯಂ ಪ್ರೇರಿತ ದೂರು ದಾಖಲಿಸಬೇಕು ಎಂದು ಒತ್ತಾಯಿಸಿರುವ ಮುರ್ಶಿದಾ ಈ ಅನ್ಯಾಯದ ವಿರುಧ್ದ ನ್ಯಾಯಾಲಯದಲ್ಲಿ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಿಎಫ್‌ಐ ರಾಜ್ಯ ಸಮಿತಿಯ ಸದಸ್ಯೆ ಫಾತಿಮಾ ಉಸ್ಮಾನ್, ಜಿಲ್ಲಾ ನಾಯಕಿ ಅಶ್ಫಿ, ವಿದ್ಯಾರ್ಥಿನಿ ಹಿಬಾ ಶೇಕ್ ಉಪಸ್ಥಿತರಿದ್ದರು.