ಪತ್ನಿಯಿಂದ ತ್ರಿಪಲ್ ತಲಾಕ್ ಕಾನೂನಿನ ದುರ್ಬಳಕೆ: ಯೂಸೂಫ್ ಆರೋಪ
ಉಡುಪಿ, ಮಾ.7: ‘ಪತ್ನಿ ಶೆಹನಾಝ್ ತ್ರಿಪಲ್ ತಲಾಕ್ ಕಾನೂನಿನ ದುರ್ಬಳಕೆ ಮಾಡಿ ನನ್ನ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಿದ್ದಾಳೆ. ಇದರ ಹಿಂದೆ ನಾನು ವಿದೇಶಕ್ಕೆ ತೆರಳದಂತೆ ತಡೆಯುವ ಷಡ್ಯಂತರ ಅಡಗಿದೆ’ ಎಂದು ಎರ್ಮಾಳಿನ ಮುಹಮ್ಮದ್ ಯೂಸೂಫ್ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಂದೆ ತೀರಿ ಹೋದದಕ್ಕೆ ಕತರ್‌ನಲ್ಲಿದ್ದ ನಾನು ತುರ್ತು ರಜೆಯಲ್ಲಿ ಊರಿಗೆ ಬಂದಿದ್ದೇನೆ. ಇದೇ ಅವಕಾಶವನ್ನು ಬಳಸಿಕೊಂಡು ದುಬೈಯಲ್ಲಿದ್ದ ಶೆಹನಾಝ್ ಊರಿಗೆ ಬಂದು ನನ್ನ ವಿರುದ್ದ ವರದಕ್ಷಿಣೆ ಕಿರುಕುಳ ಹಾಗೂ ತ್ರಿಪಲ್ ತಲಾಕ್ ದೂರನ್ನು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾಳೆ ಎಂದರು.
2006ರಲ್ಲಿ ನಾನು ಕಟಪಾಡಿ ಸುಭಾಸ್ ನಗರದ ಶೆಹನಾಝ್ ನನ್ನು ವಿವಾಹ ವಾಗಿದ್ದು, ಬಳಿಕ ನಾನು ವಿದೇಶ ಕ್ಕೆ ಉದ್ಯೋಗಕ್ಕಾಗಿ ತೆರಳಿದ್ದೆ. ಮದುವೆ ಕೆಲ ದಿನಗಳ ಬಳಿಕ ನಮ್ಮ ಮನೆಯಲ್ಲಿ ಇರಲು ಇಚ್ಛಿಸದ ಶೆಹನಾಝ್, ತವರು ಮನೆಯಲ್ಲಿಯೇ ಉಳಿದುಕೊಂಡಿದ್ದಳು. ಬಳಿಕ ಪ್ರತ್ಯೇಕ ಬಾಡಿಗೆ ಮನೆಯಲ್ಲಿದ್ದ ಆಕೆಗೆ ಈವರೆಗೆ ನಾನು 60-70ಲಕ್ಷ ರೂ. ಹಣ ಕಳುಹಿಸಿದ್ದೆ ಎಂದು ಅವರು ತಿಳಿಸಿದರು.
ಹೀಗಿರುವಾಗ ಆಕೆ ನನ್ನ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಲು ಹೇಗೆ ಸಾಧ್ಯ. ನಾನು ಆಕೆಯ ತಂದೆ ಜೊತೆ ಮೂರು ಬಾರಿ ತಲಾಕ್ ಎಂದು ಹೇಳಿರುವುದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾಳೆ. ನಾನು ತಂದೆ ಜೊತೆ ತಲಾಕ್ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಇದರ ಹಿಂದೆ ಪತ್ನಿಯ ಸಂಬಂಧಿ ಶರೀಫ್ ಎಂಬಾತನ ಕೈವಾಡ ಇದೆ. ದುಬೈಯಲ್ಲಿರುವ ಆತ ನನಗೆ ಜೀವ ಬೆದರಿಕೆಯೊಡಿದ್ದಾನೆ. ನಾನು ಎರಡನೆ ಮದುವೆಯಾಗಿಲ್ಲ. ಕೇವಲ ನಿಶ್ಚಿತಾರ್ಥ ಮಾತ್ರ ಆಗಿದೆ ಎಂದು ಅವರು ಹೇಳಿದರು.
ಎರಡನೇ ಮದುವೆ ಮರೆಮಾಚುವ ಪ್ರಯತ್ನ: ಶೆಹನಾಝ್
‘ನನಗೆ ತ್ರಿವಳಿ ತಲಾಕ್ ನೀಡಿರುವ ಎರ್ಮಾಳಿನ ಮುಹಮ್ಮದ್ ಯೂಸೂಫ್ ಅಜ್ಞಾತ ಸ್ಥಳದಲ್ಲಿ ಎರಡನೇ ಮದುವೆಯಾಗಿ ಇದೀಗ ಸತ್ಯವನ್ನು ಮರೆ ಮಾಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶೆಹನಾಝ್ ಆರೋಪಿಸಿದ್ದಾರೆ.
ಯೂಸುಫ್ ಎರಡನೇ ಮದುವೆ ಆಗಿಲ್ಲದಿದ್ದರೆ ಆತನೊಂದಿಗೆ ಎರಡನೇ ಮದುವೆ ಆಗಿರುವ ಮಹಿಳೆ ಮುಂದೆ ಬಂದು ಈ ಬಗ್ಗೆ ನೈಜತೆಯನ್ನು ಸ್ಪಷ್ಟಪಡಿಸಬೇಕು. ಆರೋಪಿ ಸ್ಥಾನದಲ್ಲಿರುವ ಮುಹಮ್ಮದ್ ಯೂಸೂಫ್ ಮನೆಯವರು ಹಾಗೂ ಆತನ ಎರಡನೇ ಪತ್ನಿ ಮನೆಯವರೆಲ್ಲ ಸೇರಿಯೇ ಎರಡನೇ ಮದುವೆ ಮಾಡಿಸಿದ್ದಾರೆ. ಈ ಬಗ್ಗೆ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಿದರೆ ಸತ್ಯ ಹೊರ ಬರಲಿದೆ. ಒಂದೊಮ್ಮೆ ಯೂಸೂಫ್ ಎರಡನೇ ಮದುವೆ ಆಗದೇ ಇದ್ದಲ್ಲಿ ಅವರು ನನ್ನ ವಿರುದ್ಧ ಕಾನೂನು ಕ್ರಮ ಜರಗಿಸಲಿ. ನಾನು ಎದುರಿಸಲು ಸಿದ್ಧ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.