ಎಬಿವಿಪಿಯ ಸಾಯಿ ಸಂದೇಶ್ ವಿರುದ್ಧ ನಾವು ನೀಡಿದ ದೂರಿನ ಪ್ರಕಾರ ಸೆಕ್ಷನ್ ದಾಖಲಿಸಿಲ್ಲ: ವಿದ್ಯಾರ್ಥಿನಿ ಹಿಬಾ ಆರೋಪ
"ಮೃತದೇಹ ಸಿಗದಂತೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ"

ಹಿಬಾ ಶೇಕ್
ಮಂಗಳೂರು, ಮಾ.7: ನಗರದ ದಯಾನಂದ ಪೈ-ಸತೀಶ್ ಪೈ ಸರಕಾರಿ ಪದವಿ ಕಾಲೇಜಿನಲ್ಲಿ ಹಿಜಾಬಿಗೆ ವಿರೋಧದ ಹಿನ್ನೆಲೆಯಲ್ಲಿ ನಾವು ಕೊಟ್ಟ ದೂರಿಗೆ ಸಂಬಂಧಿಸಿ ಪೊಲೀಸರು ಸೂಕ್ತ ಸೆಕ್ಷನ್ ದಾಖಲಿಸಿಲ್ಲ ಎಂದು ವಿದ್ಯಾರ್ಥಿನಿ ಹಿಬಾ ಶೇಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾ. 3 ಮತ್ತು 4ರಂದು ಕಾಲೇಜಿನಲ್ಲಿ ನಡೆದ ಘಟನೆಯ ಬಗ್ಗೆ ಸೋಮವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಹಿಬಾ ಶೇಕ್ ಪ್ರಾಂಶುಪಾಲರು ಯಾವುದೋ ಒತ್ತಡಕ್ಕೆ ಸಿಲುಕಿದ್ದರು. ಕಾಲೇಜಿನ ಜವಾನನು ನಮ್ಮನ್ನು ಭಯೋತ್ಪಾಕರು ಎಂಬಂತೆ ಬಿಂಬಿಸಿದ. ರಾಘವೇಂದ್ರ ಎಂಬ ಪೊಲೀಸ್ ನಮಗೆ ಬೆದರಿಕೆ ಹಾಕಿದರು. ಸಾಯಿ ಸಂದೇಶ್ ಎಂಬಾತ ನನಗೆ ಹಲ್ಲೆ ಮಾಡಿದ್ದಲ್ಲದೆ, ಮಾನಸಿಕ ಹಿಂಸೆ ನೀಡಿದ. ಈ ಬಗ್ಗೆ ನಾನು ಶುಕ್ರವಾರವೇ ಬಂದರು ಠಾಣೆಗೆ ತೆರಳಿ ದೂರು ನೀಡಿದ್ದೆ. ಆದರೆ ಕಿರುಕುಳಕ್ಕೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ಸೆಕ್ಷನ್ ನಡಿ ಪ್ರಕರಣ ದಾಖಲಿಸಿಲ್ಲ ಎಂದು ಹೇಳಿದರು.
ನಮಗೆ ಕೊಲೆ ಬೆದರಿಕೆ ಇದೆ. ಕೊಂದು ಮೃತದೇಹ ಸಿಗದಂತೆ ಮಾಡ್ತಾರಂತೆ, ವಾಟ್ಸ್ಆ್ಯಪ್ ಮೆಸೇಜ್ ಮೂಲಕ ಬೆದರಿಕೆ ಹಾಕಲಾಗುತ್ತದೆ ಎಂದು ಹಿಬಾ ಶೇಖ್ ಆರೋಪಿಸಿದರು.